ಯಾದಗಿರಿಗೆ 287.70 ಕೋಟಿ ರೂ. ವೆಚ್ಚದ ಸಮಗ್ರ ಒಳಚರಂಡಿ ಯೋಜನೆ

ಯಾದಗಿರಿ: ನಗರದ ಸಮಗ್ರ ಅಭಿವೃದ್ಧಿ, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯ ಸುಧಾರಣೆಗೆ ₹287.70 ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಸರ್ಕಾರಕ್ಕೆ ಪ್ರಸ್ತಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಪ್ರಕಟಣೆಯ ಪ್ರಕಾರ, ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ಈಗಾಗಲೇ ತಾಂತ್ರಿಕ ಅನುಮೋದನೆ ಪಡೆದಿದೆ. ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಯೋಜನೆಯ ಪ್ರಮುಖ ಅಂಶಗಳು :
► 9 ಎಂಎಲ್‌ಡಿ ಸಾಮರ್ಥ್ಯದ ಮಲಿನ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ.
► ಭೀಮಾ ನದಿಯ ಸಮೀಪ ವೆಟ್‌ವೆಲ್ ನಿರ್ಮಿಸಿ ನಗರದ ವಿವಿಧ ಭಾಗಗಳ ಕೊಳಚೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ.
► ಪಂಪ್ ಮೂಲಕ ಮಲಿನ ನೀರನ್ನು ಎಸ್‌ಟಿಪಿಗೆ ರವಾನಿಸಿ ವೈಜ್ಞಾನಿಕವಾಗಿ ಸಂಸ್ಕರಣೆ.
► ಸಂಸ್ಕರಿಸಿದ ನೀರನ್ನು ಮಾತ್ರ ನಿಯಮಾನುಸಾರ ವಿಲೇವಾರಿ ಮಾಡುವ ವ್ಯವಸ್ಥೆ.
ಯೋಜನೆ ಜಾರಿಯಾದ ಬಳಿಕ ನಗರದ ತೆರೆದ ಚರಂಡಿಗಳಿಂದ ನೇರವಾಗಿ ಭೀಮಾ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಯಲು ಸಾಧ್ಯವಾಗಲಿದೆ. ಇದರಿಂದ ನದಿಯ ಜಲಮಾಲಿನ್ಯ ಕಡಿಮೆಯಾಗುವ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ.
ಸಮಗ್ರ ಒಳಚರಂಡಿ ವ್ಯವಸ್ಥೆಯಿಂದ ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಕಂಡುಬರಲಿದ್ದು, ಮಲಿನ ನೀರಿನ ವೈಜ್ಞಾನಿಕ ನಿರ್ವಹಣೆಯಿಂದ ಸಾರ್ವಜನಿಕ ಆರೋಗ್ಯಕ್ಕೂ ಉತ್ತಮ ಪರಿಣಾಮ ಬೀಳಲಿದೆ.
ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆಯುತ್ತಿದ್ದಂತೆಯೇ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.






