ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ : ಬಿ.ಶ್ರೀರಾಮುಲು ಆರೋಪ
"CJPಯವರು ತಮ್ಮನ್ನು ‘GenZಗಳು’ ಎಂದು ಹೇಳಿಕೊಂಡು ಸಮಾಜದಲ್ಲಿ ದೊಂಬಿ ಸೃಷ್ಟಿಸಲು ಮುಂದಾಗಿದ್ದಾರೆ"

ಯಾದಗಿರಿ: ಕಾಕ್ರೋಚ್ ಜನತಾ ಪಾರ್ಟಿಯವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾನೂನುಬಾಹಿರ ಹೋರಾಟ ನಡೆಸುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ಕಾಕ್ರೋಚ್ ಜನತಾ ಪಾರ್ಟಿಯವರು ತಮ್ಮನ್ನು ‘GenZಗಳು’ ಎಂದು ಹೇಳಿಕೊಂಡು ಸಮಾಜದಲ್ಲಿ ದೊಂಬಿ ಸೃಷ್ಟಿಸಲು ಮುಂದಾಗಿದ್ದಾರೆ. ಅವರಿಗೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬೆಂಬಲವಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ತನ್ನ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಎಸ್‌ಐಆರ್ ಆಗಿರಬಹುದು ಅಥವಾ ಜಾರಿ ನಿರ್ದೇಶನಾಲಯ (ಈಡಿ) ಇರಬಹುದು, ಎಲ್ಲ ಸಂಸ್ಥೆಗಳ ಬಗ್ಗೆಯೂ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಅನುಮಾನದ ದೃಷ್ಟಿಯಿಂದ ನೋಡುತ್ತಾ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದಲೇ ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದಾರೆ. ಕೆಲ ಯೂಟ್ಯೂಬರ್‌ಗಳು ಕೇಂದ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸಲು ರಾಹುಲ್ ಗಾಂಧಿ ಅವರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದಲ್ಲಿ 70 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.
2014ರಿಂದ ದೇಶದಲ್ಲಿ ಕಾಂಗ್ರೆಸ್‌ನ ಅವನತಿ ಆರಂಭವಾಗಿದೆ. ಪ್ರಸ್ತುತ ಕೆಲವೇ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಮುಂದಿನ ದಿನಗಳಲ್ಲಿ ಆ ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಳ್ಳಲಿದೆ. ದೇಶದ ಜನರು ಕೇಂದ್ರದಲ್ಲಿ ಬಿಜೆಪಿ ಮತ್ತು ಎನ್‌ಡಿಎಗೆ ಸ್ಪಷ್ಟ ಬಹುಮತ ನೀಡಿ ಅಭಿವೃದ್ಧಿಯ ಜವಾಬ್ದಾರಿ ವಹಿಸಿದ್ದಾರೆ. ಅಂತಹ ಸರ್ಕಾರವನ್ನು ಕಿತ್ತೆಸೆಯಲು ಪ್ರತಿಪಕ್ಷಗಳು ವಿಧ್ವಂಸಕ ಕೃತ್ಯಗಳಿಗೆ ಮುಂದಾಗಿವೆ ಎಂದು ದೂರಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತೀವ್ರವಾಗಿದೆ. ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ರಾಜ್ಯದಲ್ಲಿ ಬರ ಆವರಿಸಿದೆ ಎಂದು ಆರೋಪಿಸಿದ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು. ಕಬ್ಬು ಬೆಳೆಗಾರರ ಸಭೆ ನಡೆಸಿ, ಬೆಂಬಲ ಬೆಲೆ ನೀಡಲು ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಮೋದಿ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ :
ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸಂತರಿದ್ದಂತೆ. ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಲು ಅಗತ್ಯವಿರುವ ಎಲ್ಲ ಅರ್ಹತೆಗಳನ್ನು ಪಡೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ ಸೇರಿದಂತೆ ವಿರೋಧಿಗಳು ಮೋದಿ ಅವರ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ದೇಶದ ಜನರು ಅದನ್ನು ನಂಬಲು ಸಿದ್ಧರಿಲ್ಲ ಎಂದು ಬಿ. ಶ್ರೀರಾಮುಲು ಹೇಳಿದರು.
ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯಲಿದ್ದಾರೆ ಖರ್ಗೆ :
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಮಗೆ ಗೌರವವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿಯವರ ತಂದೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದರು.
ರಾಜ್ಯದಲ್ಲಿ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡುವಾಗಲೆಲ್ಲ ಆರ್‌ಎಸ್‌ಎಸ್ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾದ ಬಳಿಕ ಲಾಂಗ್, ಮಚ್ಚುಗಳ ಬೇಡಿಕೆ ಹೆಚ್ಚಾಗಿದೆ. ಕಲಬುರಗಿಯಲ್ಲಿ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಲು ನಾವು ಪ್ರಯತ್ನಿಸಬೇಕಿಲ್ಲ. ದೊಡ್ಡ ಖರ್ಗೆ ಮತ್ತು ಮರಿ ಖರ್ಗೆ ಅವರೇ ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಪ್ರಮುಖರಾದ ಲಲಿತಾ ಅನಪುರ, ರಾಚನಗೌಡ ಮುದ್ನಾಳ್, ಮಹೇಶರಡ್ಡಿ ಮುದ್ನಾಳ್, ಡಾ. ಶರಣಭೂಪಾಲರಡ್ಡಿ ನಾಯ್ಕಲ್, ದೇವೀಂದ್ರನಾಥ ನಾದ್, ಹಣಮಂತ ಇಟಗಿ, ಪರಶುರಾಮ ಕುರಕುಂದಿ ಹಾಗೂ ಶ್ರೀಧರ ಸಾಹುಕಾರ ಉಪಸ್ಥಿತರಿದ್ದರು.






