ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡಿಸಿ ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಯಾದಗಿರಿ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡ ಸರ್ಕಾರ ದಾಖಲಿಸಿರುವ ಎಫ್‌ಐಆರ್ ಅನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ಶುನ್ನೂರ, ಕಳೆದ ಆಗಸ್ಟ್ 8ರಂದು ಉತ್ತರಾಖಂಡದ ಹಲದ್ವಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಿಸಿರುವುದು ಮನುವಾದಿ ಮನಸ್ಥಿತಿಯ ಪ್ರತೀಕ ಎಂದು ಆರೋಪಿಸಿದರು. ಈ ಘಟನೆಯನ್ನು ಖಂಡಿಸಿದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಕಿಡಿಕಾರಿದರು.
ಸ್ವಾತಂತ್ರ್ಯಕ್ಕೆ 80 ವರ್ಷಗಳಾದರೂ ದೇಶದಲ್ಲಿ ಜಾತಿ ಆಧಾರಿತ ಮನೋಭಾವ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಘಟನೆಗಳಿಗೆ ಅವಕಾಶ ಇರಬಾರದು ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮಾತನಾಡಿ, ದೇಶದ ಪ್ರಜ್ಞಾವಂತರೆಲ್ಲರೂ ಈ ಘಟನೆಯನ್ನು ಖಂಡಿಸಿದ್ದರೂ ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರಪ್ಪ ಬಿಳ್ಳಾರ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಪಕ್ಷದ ಮುಖಂಡರಾದ ಆದರ್ಶ ಯಲ್ಲಪ್ಪ, ಪರಶುರಾಂ ಚವ್ಹಾಣ, ಶಿವಕುಮಾರ ಹುಲಕಲ್, ನಾಗಣಗೌಡ ಹಳಿಗೇರಾ, ಶಿವರಾಜ ಬಾವೂರ,ಬಾಬುಗೌಡ ಮಾಚನೂರ, ಸುರೇಶಗೌಡ, ಶರಣು ಪಡಶೆಟ್ಟಿ, ಸುರೇಶ ಮಡ್ಡಿ, ಸಾಬಣ್ಣ ಕೆಂಗೂರಿ, ರಾಜಮೈನೊದ್ದಿನ್ ಮಿರ್ಚಿ, ಶಿವು ಕೊಲಿವಾಡ, ಮಹೇಶ ಕೊಲೂರು ಇತರರಿದ್ದರು.






