ವಡಗೇರಾ, ಶಹಾಪುರ ತಾಲೂಕಿನಲ್ಲಿ ಕೇವಲ ನೆಪಮಾತ್ರಕ್ಕೆ ಸಂವಿಧಾನ ದಿನಾಚರಣೆ: ದಲಿತ ಸೇನೆ ಆರೋಪ

ಯಾದಗಿರಿ: ವಡಗೇರಾ ಮತ್ತು ಶಹಾಪುರ ತಾಲೂಕುಗಳಲ್ಲಿ ಸಂವಿಧಾನ ದಿನಾಚರಣೆಯ ಸರಕಾರಿ ಕಾರ್ಯಕ್ರಮವನ್ನು ಗಂಭೀರವಾಗಿ ನಿರ್ಲಕ್ಷಿಸಿ, ಕೇವಲ ನೆಪಮಾತ್ರಕ್ಕಾಗಿ ಆಚರಿಸಿದ ಇಬ್ಬರು ತಹಶೀಲ್ದಾರರ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಹೊಸಮನಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಆದೇಶದಂತೆ ತಾಲೂಕು ಮಟ್ಟದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಬೇಕಿದ್ದರೂ, ವಡಗೇರಾ ತಹಶೀಲ್ದಾರ್ ಅವರು ಸಭಾ ಕಾರ್ಯಕ್ರಮಗಳನ್ನು ತುರ್ತು ಮತ್ತು ಅವ್ಯವಸ್ಥೆಯಿಂದ ಹಮ್ಮಿಕೊಂಡಿರುವುದು ಗಂಭೀರ ನಿರ್ಲಕ್ಷ್ಯವೆಂದು ಆರೋಪಿಸಿದ್ದಾರೆ.
ಕಾರ್ಯಕ್ರಮದ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು ಸಂವಿಧಾನ ಪುಸ್ತಕಗಳನ್ನು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರವರ ನುಡಿ ಮುತ್ತುಗಳನ್ನು ಪ್ರದರ್ಶಿಸುತ್ತಾ ಹಾಗೂ ಭಾರತದ ರಾಷ್ಟ್ರ ಧ್ವಜವನ್ನು ಹಿಡಿದು ಸಂವಿಧಾನ ಜಾಥಾ ಹಮ್ಮಿಕೊಳ್ಳುವಂತೆ ಸರಕಾರ ಆದೇಶಿಸಿದ್ದರೂ ತಹಶೀಲ್ದಾರ್ ಅವರು ಇದ್ಯಾವುದನ್ನು ಮಾಡದೇ ಕೇವಲ ಕಾಟಾಚಾರಕ್ಕಾಗಿ 50 ರಿಂದ 60 ಶಾಲಾ ಮಕ್ಕಳೊಂದಿಗೆ ಜಾಥಾ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸರಕಾರದ ವತಿಯಿಂದ ಒಂದು ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿದರೂ, ತಹಶೀಲ್ದಾರ್ ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ತಮ್ಮ ಬೇಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ಆರೋಪಿಸಿದರು.
ಸುರಪುರದಲ್ಲಿ ಸಂವಿಧಾನ ದಿನಾಚರಣೆಯ ವೇಳೆ ಹಿರಿಯ ದಲಿತ ಮುಖಂಡ ಮಾನಪ್ಪ ಕಟ್ಟಿಮನಿ ಅವರ ಮೇಲೆ ಶಾಸಕರ ಹಿಂಬಾಲಕರು ಹಲ್ಲೆ ಮಾಡಿರುವುದನ್ನು ದಲಿತ ಸೇನೆ ಖಂಡಿಸಿದೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಶಾಂತಪ್ಪ ಸಾಲಿಮನಿ, ಅಯ್ಯಪ್ಪ ಗೊಂದೆನೂರು, ರವಿಕುಮಾರ್ ಕಟ್ಟಿಮನಿ, ಮನೋಜ ಕುರಕುಂದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







