ಯಾದಗಿರಿಯಲ್ಲಿ ಸೆ.14ರಂದು ಸ್ವಾಭಿಮಾನಿ ಬಳಗದಿಂದ ʼಸಂವಿಧಾನವೇ ಸಿದ್ಧಾಂತʼ ಕಾರ್ಯಕ್ರಮ

ಯಾದಗಿರಿ: ಇನ್‌ಸೈಟ್ಸ್ ಐಎಎಸ್‌ನ ಸಂಸ್ಥಾಪಕರಾದ ಜಿ.ಬಿ.ವಿನಯ್‌ಕುಮಾರ್ ಅವರ ಸ್ವಾಭಿಮಾನಿ ಬಳಗದ ವತಿಯಿಂದ ಯಾದಗಿರಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ "ಸಂವಿಧಾನವೇ ಸಿದ್ಧಾಂತ" ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ ನಡೆಯಿತು.
ಸಭೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿನಯ್‌ಕುಮಾರ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿರುವುದಕ್ಕೆ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿನ ಫಲಿತಾಂಶಗಳಲ್ಲಿ ಕೊನೆಯ ಸ್ಥಾನದಲ್ಲಿರುವುದೇ ಸಾಕ್ಷಿಯಾಗಿದೆ. ಹಿಂದುಳಿದ ಜಿಲ್ಲೆಗಳೆಂಬ ಹಣೆಪಟ್ಟಿಯಿಂದ ಹೊರತರುವ ಪ್ರಾಮಾಣಿಕ ಪ್ರಯತ್ನಗಳು ಯಾಕೆ ಆಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್. ಕೆಎಎಸ್, ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ತೇರ್ಗಡೆ ಹೊಂದಿ ಅಧಿಕಾರಿಗಳಾಗಬೇಕು. ನಮ್ಮಿಂದಾಗದು ಎಂಬ ನಿಸ್ಸಹಾಯಕತೆ ದೂರವಾಗಬೇಕು. ಆತ್ಮ ಸ್ಥೈರ್ಯ ತುಂಬುವಂತಹ ಕೆಲಸ ನಾವು ಹಾಗೂ ಪೋಷಕರು ಮಾಡಬೇಕಾಗುತ್ತದೆ.
ಸ್ವಾಭಿಮಾನಿ ಬಳಗವು ರಾಜ್ಯಾದ್ಯಂತ ಶಿಕ್ಷಣದ ಮಹತ್ವದೊಂದಿಗೆ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ನಾಯಕತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೆ.14 ರಂದು ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ "ಸಂವಿಧಾನವೇ ಸಿದ್ಧಾಂತ" ಎಂಬ ಕಾರ್ಯಕ್ರಮವನ್ನು ಯಾದಗಿರಿನ ನಗರದಲ್ಲಿ ಆಯೋಜಿಸಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಶಿಕ್ಷಣ, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನಾಯಕತ್ವದ ಮಹತ್ವವನ್ನು ಬೆಂಬಲಿಸುವ ರೈತ ಪರ, ಕನ್ನಡ ಪರ, ದಲಿತ ಸಂಘಟನೆಗಳು, ಅಹಿಂದ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸ್ತ್ರೀ ಶಕ್ತಿ ಮಹಿಳಾ ಸಂಘಟನೆಗಳ ಜೊತೆಯಲ್ಲಿ "ಸಂವಿಧಾನವೇ ಸಿದ್ದಾಂತ"ದ ಜಾಗೃತಿ ಜಾಥಾ ಮೊದಲ ಹಂತವಾಗಿ ಬೀದರ್‌ನಿಂದ ಬಳ್ಳಾರಿಯವರೆವಿಗೂ ನಡೆಸುವ ಬಗ್ಗೆ ರೂಪುರೇಷೆಗಳು ತಯಾರಾಗುತ್ತಿದೆ ಎಂದು ಹೇಳಿದರು.







