ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣದಿಂದ ಜಾನುವಾರುಗಳ ಚಿಕಿತ್ಸೆಗೆ ಅನುಕೂಲ : ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಗ್ರಾಮೀಣ ಭಾಗದ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ರೈತರಿಗೆ ಜಾನುವಾರುಗಳು ಆಧಾರಸ್ತಂಭವಾಗಿದ್ದು, ಅವುಗಳ ಆರೋಗ್ಯ ಕಾಪಾಡಲು ಗ್ರಾಮದಲ್ಲಿಯೇ ಪಶು ಚಿಕಿತ್ಸಾಲಯ ನಿರ್ಮಿಸಿರುವುದು ಅನುಕೂಲಕರವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ತಾಲ್ಲೂಕಿನ ರಾಮಸಮುದ್ರ ಗ್ರಾಮದಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪಶು ಚಿಕಿತ್ಸಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದೇಶಕ್ಕೆ ಅನ್ನ ನೀಡುವವರಾಗಿದ್ದು, ಕೃಷಿ ಚಟುವಟಿಕೆಗಳಿಗೆ ನಿಸರ್ಗದ ಸಹಕಾರವೂ ಅಗತ್ಯವಾಗಿದೆ. ರೈತರು ಹಾಗೂ ಅವರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಕಾಲದಲ್ಲಿ ಮಳೆ ಹಾಗೂ ಉತ್ತಮ ಬೆಳೆ ದೊರೆಯಲಿ ಎಂದು ಆಶಿಸಿದರು.
ಕೃಷಿಯೊಂದಿಗೆ ಹೈನುಗಾರಿಕೆ, ಕುರಿ ಹಾಗೂ ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ರಾಜಶೇಖರ ಕಾಸಬಾಗ ಮಾತನಾಡಿ, ಜಿಲ್ಲೆಯ ಹಲವು ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು ನೇಮಕಾತಿಗೆ ಕ್ರಮ ಕೈಗೊಂಡು ರೈತರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಡಾ. ಸುಭಾಶ್ಚಂದ್ರ ಟಕ್ಕಳಕಿ, ತಾಲ್ಲೂಕಾ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪ ಬಾಗ್ಲಿ, ಬಾಬುಗೌಡ ಪಾಟೀಲ್, ನಾಗಣಗೌಡ ಹಳಿಗೇರಾ, ವಾಸುದೇವ ದನಕಾಯಿ, ಬಾಸ್ಕರ್, ಮಲ್ಲಿಕಾರ್ಜುನ ಜಲ್ಲಪ್ಪನೋರ, ಗೋಪಾಲ ಚವ್ಹಾಣ, ಚಂದಪ್ಪ ದಂಡಯ್ಯನೋರ, ಮರೆಪ್ಪ ದುಗನೂರ, ಹಣಮಂತ ಮ್ಯಾಗಳೋರ, ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.






