ಕೃಷ್ಣಾ ನದಿಗೆ ಹರಿದು ಬರುತ್ತಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು: ಕ್ರಮಕ್ಕೆ ಒತ್ತಾಯ

ವಡಗೇರಾ: ತಾಲೂಕಿನ ತುಮಕೂರು ಗ್ರಾಮದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ಹಳ್ಳದ ಮೂಲಕ ಕೃಷ್ಣಾ ನದಿಗೆ ಹರಿಬಿಡುತ್ತಿದ್ದು ಇದರಿಂದ ಜನ ಜಾನುವಾರುಗಳಿಗೆ ಮಾರಕವಾಗಿದೆ. ಇದರಿಂದ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಚನ್ನೂರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ತ್ಯಾಜ್ಯಗಳನ್ನು ಕೃಷ್ಣಾ ನದಿಗೆ ಸುಮಾರು ವರ್ಷಗಳಿಂದ ಹರಿ ಬಿಡಲಾಗುತ್ತಿದೆ. ಇದರಿಂದ ನದಿಯ ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಸೇವನೆಯಿಂದ ಜಲಚರ ಪ್ರಾಣಿಗಳು ಹಾಗೂ ದನಕರುಗಳು ಸಾವನ್ನಪ್ಪುತ್ತಿವೆ. ಆದರೆ ಸಂಬಂಧಿಸಿದ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಕಾರ್ಖಾನೆಯೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೃಷ್ಣಾ ನದಿಗೆ ನೀರು ಹರಿಬಿಡುತ್ತಿರುವುದರಿಂದ ಮಿನು ಜಲಚರ ಪ್ರಾಣಿಗಳ ಮಾರಣಹೋಮ ನಡೆಯುತ್ತಿದೆ. ನದಿಯ ನೀರು ಸಂಪೂರ್ಣವಾಗಿ ಮಲಿನವಾಗುತ್ತಿದೆ. ಕೂಡಲೇ ಸರಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ನದಿಗೆ ನೀರು ಹರಿಯುವುದನ್ನು ತಡೆಯುವುದರ ಜೊತೆಗೆ ಸಕ್ಕರೆ ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯದ್ಯಕ್ಷರಾದ ಚೂನಪ್ಪ ಪೂಜಾರಿ ಹಾಗೂ ರಾಜ್ಯ ಕಾರ್ಯಧ್ಯಕ್ಷರಾದ ಮಹೇಶ್ ಪಾಟೀಲ್ ಸುಬೇದಾರ್ ನೇತೃತ್ವದಲ್ಲಿ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ವಿರುದ್ಧ ತೀವ್ರ ಹೋರಾಟ ಮಾಡುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಚನ್ನೂರ ಎಚ್ಚರಿಸಿದ್ದಾರೆ.







