ಬೆಳೆ ಹಾನಿ : ಸಮೀಕ್ಷೆ ಮುಗಿಯುತ್ತಿದ್ದಂತೆ ಶೀಘ್ರ ಪರಿಹಾರ ವಿತರಣೆ : ಸಂಸದ ಜಿ.ಕುಮಾರ್ ನಾಯಕ್

ಯಾದಗಿರಿ: ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸತತ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಮತ್ತು ಮನೆ ಹಾನಿಯಾಗಿದ್ದು, ಈ ಕುರಿತು ಅಧಿಕಾರಿಗಳಿಂದ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣ ಪರಿಹಾರ ವಿತರಣೆ ಮಾಡಲಾಗುವುದು ಎಂದು ಸಂಸದ ಜಿ.ಕುಮಾರ್ ನಾಯಕ್ ತಿಳಿಸಿದ್ದಾರೆ.
ಸೋಮವಾರ ಅವರು ಯಾದಗಿರಿ ತಾಲೂಕಿನ ಯಾದಗಿರಿ ಬಿ., ವಡಗೇರಾ ತಾಲೂಕಿನ ಗುರುಸುಣಿಗಿ ಹಾಗೂ ನಾಯ್ಕಲ್ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಇತ್ತೀಚಿನ ಅತಿವೃಷ್ಟಿಯಿಂದ ಹಾನಿಗೊಳಗಾದ ತೊಗರಿ, ಹೆಸರು ಮತ್ತು ಹತ್ತಿ ಬೆಳೆಗಳನ್ನು ಪರಿಶೀಲಿಸಿದರು.
ನಂತರ ನಾಯ್ಕಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿಗೆ ಸಂಬಂಧಿಸಿ ಎನ್‌ಡಿಆರ್‌ಎಫ್ ನಿಯಮಾವಳಿಯೊಂದಿಗೆ ರಾಜ್ಯ ಸರ್ಕಾರವು ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚುವರಿ ಪರಿಹಾರ ಘೋಷಿಸಿದೆ. ಶೀಘ್ರದಲ್ಲೇ ರೈತರಿಗೆ ಈ ಪರಿಹಾರ ವಿತರಿಸಲಾಗುವುದು ಎಂದರು.
ಭೀಮಾ ನದಿ ದಂಡೆಯ ಹತ್ತಿರದ ಹೊಲಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದನ್ನು ನೇರವಾಗಿ ಕಂಡಿದ್ದೇನೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ ರೈತರ ಅಹವಾಲು ಆಲಿಸಿದ್ದಾರೆ. ಪ್ರತಿ ವರ್ಷ ಈ ಭಾಗ ಅತಿವೃಷ್ಟಿ ಅಥವಾ ಅನಾವೃಷ್ಠಿಗೆ ತುತ್ತಾಗುತ್ತಿರುವುದರಿಂದ, ಇಂದಿನ ಎನ್‌ಡಿಆರ್‌ಎಫ್ ನಿಯಮಾವಳಿಯಿಂದ ರೈತರಿಗೆ ನ್ಯಾಯಯುತ ಪರಿಹಾರ ದೊರೆಯುತ್ತಿಲ್ಲ. ನಾನು ಈ ನಿಯಮಾವಳಿಗಳ ಅಧ್ಯಯನ ನಡೆಸುತ್ತಿದ್ದು, ಅಗತ್ಯ ತಿದ್ದುಪಡಿ ಮಾಡಲು ಕೇಂದ್ರದ ಗಮನ ಸೆಳೆಯುವೆ ಎಂದು ಭರವಸೆ ನೀಡಿದರು.
ನಾಯ್ಕಲ್ ಗ್ರಾಮದ ಸುಮಾರು 270 ಮನೆಗಳು ಪ್ರತಿ ಬಾರಿ ಪ್ರವಾಹಕ್ಕೆ ತುತ್ತಾಗುತ್ತಿರುವುದರಿಂದ, ಶಾಶ್ವತ ಪರಿಹಾರವಾಗಿ ಗ್ರಾಮ ಸ್ಥಳಾಂತರ ಕುರಿತಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅವರು ವಡಗೇರಾ ತಾಲೂಕಿನ ಗುರುಸುಣಿಗಿ ಗ್ರಾಮದ ಸರ್ವೇ ನಂ.227/1 ರಲ್ಲಿ ಶಂಕರಪ್ಪಗೌಡ ಬಸವರಾಜಪ್ಪರ 3.33 ಎಕರೆ, ಸರ್ವೇ ನಂ.227/2 ರಲ್ಲಿ ವಿಶ್ವನಾಥರೆಡ್ಡಿ ಸೋಮನಾಥರೆಡ್ಡಿಯವರ 4 ಎಕರೆ ಹತ್ತಿ ಬೆಳೆ ಮತ್ತು ನಾಯ್ಕಲ್ ಗ್ರಾಮದ ಸರ್ವೇ ನಂ.454/3 ರಲ್ಲಿ ಮೊಹಮ್ಮದ್ ಹನೀಫ್ ಬಡೇಸಾಬ್ ಅವರ 3 ಎಕರೆ ಭತ್ತ ಬೆಳೆ ಪರಿಶೀಲಿಸಿದರು. ರೈತರು ಪರಿಹಾರ ಸಾಲದು, ಬೆಳೆ ಸಾಲ ಮನ್ನಾ ಮಾಡಬೇಕೆಂದು ಮನವಿ ಮಾಡಿದರು. ನಾಯ್ಕಲ್ ಗ್ರಾಮದಲ್ಲಿ ಮಳೆ ನೀರು ನುಗ್ಗಿ ಮನೆ ಹಾನಿಯಾದ ಕುರಿತು ಗ್ರಾಮಸ್ಥರಿಂದ ಸಂಸದರು ಮಾಹಿತಿ ಪಡೆದರು. ನಂತರ ಶಹಾಪೂರ ತಾಲೂಕಿನ ಹತ್ತಿಗುಡೂರ ಗ್ರಾಮದ ಸರ್ವೇ ನಂ.203 ರಲ್ಲಿ ಕಾರ್ತಿಕ ಭೀಮಾರಾಯ ಅವರ 4.20 ಎಕರೆ ಹತ್ತಿ ಬೆಳೆ ಸಂಪೂರ್ಣ ಹಾನಿಯಾದುದನ್ನು ಸಹ ವೀಕ್ಷಿಸಿದರು.
ಕೆ.ಕೆ.ಆರ್.ಡಿ.ಬಿಗೆ ಕೇಂದ್ರದಿಂದ ವಿಶೇಷ ಅನುದಾನ ನೀಡಬೇಕು :
ಡಾ.ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನ ತಿದ್ದುಪಡಿ ಮೂಲಕ 371(J) ವಿಧಾನದಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಆದರೆ ಕಾಯ್ದೆ ಜಾರಿಯಾದ ಬಳಿಕವೂ ಕೇಂದ್ರ ಸರ್ಕಾರದಿಂದ ಯಾವುದೇ ನೇರ ಅನುದಾನ ದೊರೆತಿಲ್ಲ. ರಾಜ್ಯ ಸರ್ಕಾರವೇ ಪ್ರತಿ ವರ್ಷ 5,000 ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರೂ, ಕೇಂದ್ರ ಸರ್ಕಾರವೂ ರಾಜ್ಯದಂತೆಯೇ ವಿಶೇಷ ಅನುದಾನ ನೀಡಿ ಅಭಿವೃದ್ಧಿಯಲ್ಲಿ ಪಾಲುದಾರಿಕೆ ವಹಿಸಬೇಕು ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದರು.
ನೀತಿ ಆಯೋಗ ಗುರುತಿಸಿರುವ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಯಾದಗಿರಿ ಮತ್ತು ರಾಯಚೂರು ಸೇರಿದ್ದರೂ, ಕೇಂದ್ರ ಸರ್ಕಾರ ನೀಡುವ 2 ರಿಂದ 5 ಕೋಟಿ ರೂ. ಅನುದಾನದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಈ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ತಹಶೀಲ್ದಾರ್ ಸುರೇಶ ಅಂಕಲಗಿ, ಸಹಾಯಕ ಕೃಷಿ ನಿರ್ದೇಶಕರು ಸುರೇಶ್ ಮತ್ತು ಸುನೀಲ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.







