ಬೆಳೆ ವಿಮೆ ರೈತರಿಗೆ ಆರ್ಥಿಕ ರಕ್ಷಾ ಕವಚ; ತಪ್ಪದೇ ನೋಂದಾಯಿಸಿ : ರಾಚನಗೌಡ ಮುದ್ನಾಳ

ಯಾದಗಿರಿ: ಮಳೆ-ಬೆಳೆಗಳ ಅನಿಶ್ಚಿತತೆ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ಹಾನಿಯನ್ನು ತಡೆದುಕೊಳ್ಳಲು ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಹಾಗೂ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ, ಬೆಳೆ ರೋಗ, ಕೀಟಬಾಧೆ, ಆಲಿಕಲ್ಲು ಮಳೆಯಂತಹ ಪ್ರಕೃತಿ ವಿಕೋಪಗಳು ಯಾವಾಗ ಸಂಭವಿಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ವರ್ಷದ ಶ್ರಮ ನೀರಿನಲ್ಲಿ ಹೋಮವಾದಂತಾಗುತ್ತದೆ. ಈ ನಷ್ಟವನ್ನು ಸರಿದೂಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ರೈತರಿಗೆ ಇರುವ ಏಕೈಕ ಆರ್ಥಿಕ ರಕ್ಷಾಕವಚವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೈತರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್‌ಸಿ ಕೇಂದ್ರ ಅಥವಾ ಬ್ಯಾಂಕ್‌ಗಳಿಗೆ ಭೂಮಿಯ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಬಿತ್ತನೆ ದೃಢೀಕರಣ ಪತ್ರದಂತಹ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿಗದಿತ ಅವಧಿಯೊಳಗೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಬೇಕು.
ಕೃಷಿ ಇಲಾಖೆ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರಿಗೆ ಬೆಳೆ ವಿಮೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿ, ಎಲ್ಲಾ ಅರ್ಹ ರೈತರು ಯೋಜನೆಯ ಲಾಭ ಪಡೆಯುವಂತೆ ನೋಡಿಕೊಳ್ಳಬೇಕು. ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದೆ ರೈತರೇ ಖುದ್ದಾಗಿ ಹೋಗಿ ವಿಮೆ ನೋಂದಾಯಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.






