ಯಾದಗಿರಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಯಾದಗಿರಿ: ಸುರಪುರ ನಗರದ ಸರ್ವೆ ನಂ. 7/1 ರಲ್ಲಿ ಸರ್ಕಾರಿ ಖಾರಿಜ್ ಖಾತಾ ಭೂವಿಯಲ್ಲಿ ಸುಮಾರು ನಲವತ್ತುಕ್ಕೂ ಹೆಚ್ಚು ವರ್ಷಗಳಿಂದ ಕಬ್ಜದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಸುತ್ತಲೂ ಅಭಿವೃದ್ದಿ ಪಡಿಸಲು ಮತ್ತು ದಲಿತ ಸಮಾಜದ ಉದ್ಧಾರಕ್ಕಾಗಿ ವಿವಿಧ ಯೋಜನೆಗಳಿಗೆ ಅವಶ್ಯಕತೆಯಿರುವ ಈ ಸರ್ವೆ ನಂಬರನಲ್ಲಿ ಒತ್ತುವರಿಯಾದ 2 ಎಕರೆ 26 ಗುಂಟೆ ಭೂಮಿಯನ್ನು ಕೂಡಲೇ ಮಂಜೂರು ಮಾಡಬೇಕೆಂಬ ಬೇಡಿಕೆ ಸೇರಿದಂತೆಯೇ ವಿವಿಧ ಆರು ಬೇಡಿಕೆಗಳಿಗೆ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರಾದ ಮಲ್ಲಿಕಾರ್ಜುನ ಕ್ರಾಂತಿ ಮತ್ತು ಮಾನಪ್ಪ ಕಟ್ಟಿಮನಿ ಅವರು, ಸರ್ಕಾರ ನೀಡಿರುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಾಲೂಕಿನಲ್ಲಿ ಸಾಮರಸ್ಯ, ಸೌಹಾರ್ದತೆಗೆ ದಕ್ಕೆ ತರುವಂತಹ ರೀತಿಯಲ್ಲಿ ಕೆಲಸ ಮಾಡುತ್ತಿರುವ ಸುರಪುರ ಪೊಲೀಸ್ ಠಾಣೆಯ ಆರಕ್ಷಕ ನೀರಿಕ್ಷಕರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕೆಂದು ಅವರು ಆಗ್ರಹಿಸಿದರು.
ದಲಿತರ ಮೇಲೆ ಸುಳ್ಳು ಕೌಂಟರ್ ಕೇಸ್ ಗಳನ್ನು ದಾಖಲಿಸಿದನ್ನು ಕೂಡಲೇ ರದ್ದು ಮಾಡಬೇಕು. ಡಾ. ಅಂಬೇಡ್ಕರ್ ಪುತ್ಥಳಿ ಪಕ್ಕದಲ್ಲಿ ಹಾಕಿರುವ ನೀಲಿ ಧ್ವಜಗಳನ್ನು ಯತಾವತ್ತಾಗಿ ಮುಂದುವರೆಸಬೇಕು. ಕಳೆದ ಜುಲೈ 25 ರಂದು ಹೊಸದಾಗಿ ಹಾಕಿರುವ ವಾಲ್ಮೀಕಿ ಸಮಾಜದ ಧ್ವಜಗಳನ್ನು ಗೌರಯುತವಾಗಿ ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಎಚ್ ಕೆ ಇ ಸೊಸೈಟಿ ಹೆಸರಲ್ಲಿ ಅನಧಿಕೃತವಾಗಿ ಕೆಂಭಾವಿ ಮುಖ್ಯ ರಸ್ತೆಯಲ್ಲಿರುವ ದರ್ಗಾ ಮತ್ತು ಸಾರ್ವಜನಿಕ ಬಾವಿಯನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಸರ್ವೆ ನಂ. 7/1 ರಲ್ಲಿ ಭೂಮಿ ಮಂಜೂರು ಮಾಡಿ ಸುರಪುರ ದಲಿತ ಜನಾಂಗದ ವಿವಿಧ ಅಭಿವೃದ್ಧಿಗೋಸ್ಕರ ಡಾ. ಅಂಬೇಡ್ಕರ್ ಅವರ ಹೆಸರಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸುಸಜ್ಜಿತ ಉದ್ಯಾನವನ, ಸಾಂಸ್ಕ್ರತಿಕ ಭವನ ಮತ್ತು ಗ್ರಂಥಾಲಯವನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಎಲ್ಲ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡರಾದ ಮರೆಪ್ಪ ಚಟ್ಟೇರಕರ್, ರಾಹುಲ್ ಹಾಲಿಮನಿ, ಮಾಳಪ್ಪ ಕಿರದಳ್ಳಿ, ನಾಗಣ್ಣ ಕಲ್ಲದೇವನಹಳ್ಳಿ, ನಾಗಣ್ಣ ಬಡಿಗೇರ, ಭೀಮರಾಯ ಸಿಂದಗೇರಿ, ಕಾಶೀನಾಥ ನಾಟೇಕಾರ್, ಶರಣು ನಾಟಿಕಾರ, ಶಿವಲಿಂಗ ಛಲವಾದಿ, ಭೀಮರಾಯ ಹೊಸ್ಮನಿ ಸೇರಿದಂತೆ ಅನೇಕ ದಲಿತ ಮುಖಂಡರು ಇತರರಿದ್ದರು.







