ಕೊಳಚೆ ನೀರಿನಿಂದ ಲುಂಬಿನಿ ಉದ್ಯಾನವನ ಕೆರೆಯ ಮೀನುಗಳ ಸಾವು
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗಬ್ಬೆದ್ದು ನಾರುತ್ತಿದೆ ಯಾದಗಿರಿಯ ಏಕೈಕ ಪಾರ್ಕ್

ಯಾದಗಿರಿ : ಸುತ್ತಮುತ್ತಲಿನ ನಗರಗಳ ಕೊಳಚೆ ಚರಂಡಿ ನೀರು ಬಂದು ಕೆರೆಗೆ ಸೇರುತ್ತಿರುವ ಪರಿಣಾಮವಾಗಿ ಇಲ್ಲಿನ ಲುಂಬಿನಿ ಉದ್ಯಾನವನದ ಕೆರೆಯಲ್ಲಿದ್ದ ಸಾವಿರಾರು ಸಂಖ್ಯೆಯ ಮೀನುಗಳು ಸಾವನ್ನಪ್ಪುತ್ತಿರುವ ಘಟನೆ ಕಂಡುಬಂದಿದೆ.
ಜಿಲ್ಲೆಯ ಹೃದಯ ಭಾಗದಲ್ಲಿ ಇರುವ ಲುಂಬಿನಿ ಉದ್ಯಾನವನದ ಸುತ್ತಮುತ್ತಲಿನ ನಗರಗಳ ಚರಂಡಿಯ ಕೊಳಚೆ ನೀರು ಕೆರೆಗೆ ಹರಿಯುತ್ತಿರುವ ಕಾರಣ ಸಾಕಷ್ಟು ಮೀನುಗಳು ಸಾವನ್ನಪ್ಪುತ್ತಿದ್ದು, ಇದ್ದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳಿಂದ ಕೆರೆಯಲ್ಲಿ ಮೀನುಗಳು ಮೃತಪಟ್ಟು ದಡದಲ್ಲಿ ತೇಲಾಡುತ್ತಿದ್ದು, ಮೀನುಗಳು ಗಬ್ಬು ನಾರುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿನ ಏಕೈಕ ಪಾರ್ಕ್‌ನ್ನು ಸುಸ್ಥಿಯಲ್ಲಿ ಇಡಲು ಅಧಿಕಾರಿಗಳಿಂದ ಸಾಧ್ಯವಾಗ ದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉದ್ಯಾನದಲ್ಲಿ ಸ್ವಚ್ಛತೆ ಇಲ್ಲದ ಕಾರಣ ದುರ್ವಾಸನೆ ಹೆಚ್ಚಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಉದ್ಯಾನವನದ ಸುತ್ತಮುತ್ತ ಸರಿಯಾದ ರೀತಿಯಲ್ಲಿ ಭದ್ರತೆ ಇಲ್ಲದೆ ಇರುವುದರಿಂದ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯ ವಸ್ತುಗಳನ್ನು ಇಲ್ಲಿ ಬಿಸಾಡುತ್ತಿದ್ದು, ಉದ್ಯಾನವನವು ಕಸದ ತಿಪ್ಪೆಯಂತಾಗಿದೆ.
ಉದ್ಯಾನವನ ಸುತ್ತಲೂ ಸಂಚರಿಸುವ ಸಾರ್ವಜನಿಕರು ದುರ್ವಾಸನೆಯಿಂದ ಮೂಗು ಮುಚ್ಚಿ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.
ತುಕ್ಕು ಹಿಡಿದ ನೀರಿನ ಘಟಕ : ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಇದುವರೆಗೂ ಉಪಯೋಗಿಸದೇ ಇರುವ ಕಾರಣ ತುಕ್ಕು ಹಿಡಿದು ಹೋಗಿವೆ.
ಲುಂಬಿನಿ ಉದ್ಯಾನವನಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಮಾಡಬೇಕು.ಉದ್ಯಾನವನದ ಮಧ್ಯದಲ್ಲಿ ಇರುವ ನಡುಗಡ್ಡೆ ಬಳಿ ಬುದ್ಧನ ಮೂರ್ತಿ ಪ್ರತಿಷ್ಠಾಪಿಸಬೇಕು. ಮಕ್ಕಳ ಆಟಿಕೆಗಳು ಮುರಿದು ಹೋಗಿವೆ. ಕುಡಿಯಲು ನೀರಿನ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆಗಳಿಲ್ಲ. ಉದ್ಯಾನವನಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕು. ಮೂಲಸೌಕರ್ಯ ಹೆಚ್ಚಿಸಬೇಕು.
-ಮರೆಪ್ಪ ಚಟ್ಟೇರಕರ್, ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ
ನಿರ್ವಹಣೆ ಇಲ್ಲದೇ ಉದ್ಯಾನವನ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.
-ಚಂದಪ್ಪ ಮುನಿಯಪ್ಪನೋರ್, ದಲಿತ ಸಂಘಟನೆ ಜಿಲ್ಲಾ ಸಂಚಾಲಕ
ಉದ್ಯಾನವನ ಪ್ರವೇಶಕ್ಕೆ 10 ರೂ. ಟಿಕೆಟ್ ದರ ಪಡೆಯಲಾಗುತ್ತದೆ. ಆದರೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಕೆರೆಯ ನಿರ್ವಹಣೆ ಇಲ್ಲದೇ ಮೀನುಗಳು ಸತ್ತು ಹೋಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪರಿಸರ ದುರ್ವಾಸನೆಯಿಂದ ಕೂಡಿದೆ.
-ಸುಶ್ಮಿತಾ ಎಸ್. ಚಟ್ಟೇರಕರ್, ಪ್ರವಾಸಿ







