ಯಾದಗಿರಿಯನ್ನು ಬರಪೀಡಿತ ಜಿಲ್ಲೆ ಘೋಷಿಸಿ: ರೈತರ ಸಾಲಮನ್ನಾಕ್ಕೆ ಸಮತಾ ಸೈನಿಕ ದಳ ಆಗ್ರಹ

ಯಾದಗಿರಿ : ಯಾದಗಿರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸಮತಾ ಸೈನಿಕ ದಳ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯ ಮುಖಂಡರು, ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾದ ಯಾದಗಿರಿಯಲ್ಲಿ ಈ ಬಾರಿ ಮುಂಗಾರು ಸಂಪೂರ್ಣ ವಿಫಲಗೊಂಡಿದ್ದು, ಮಳೆ ನಂಬಿ ಬಿತ್ತನೆ ಮಾಡಿದ ರೈತರು ಬೆಳೆ ಹಾನಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಸಾಲದ ಹೊರೆ ಹಾಗೂ ಆರ್ಥಿಕ ಸಂಕಷ್ಟದಿಂದ ರೈತರು ನಲುಗುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಜೊತೆಗೆ, ಜಿಲ್ಲೆಯ ಪ್ರತಿಯೊಬ್ಬ ರೈತ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರಧನ ನೀಡಿ ರೈತರ ಸಂಕಷ್ಟ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಚಂದ್ರಶೇಖರ್ ಗುತ್ತೇದಾರ್, ಜಿಲ್ಲಾ ಅಧ್ಯಕ್ಷ ಹತ್ತಿಗೂಡೂರು ಶರಣರೆಡ್ಡಿ, ಶರಣಪ್ಪ ಚಲವಾದಿ, ರಾಮಪ್ಪ ಮಾಲಹಳ್ಳಿ, ಮಲ್ಲಿಕಾರ್ಜುನ ಮಾಲಹಳ್ಳಿ ಸೇರಿದಂತೆ ಸಮತಾ ಸೈನಿಕ ದಳದ ಪದಾಧಿಕಾರಿಗಳು ಹಾಗೂ ದಲಿತಪರ ರೈತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.






