ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ: ಸಚಿವ ಶರಣಪ್ರಕಾಶ್ ಪಾಟೀಲ್‌ಗೆ ರೈತ ಸಂಘ ಮನವಿ

ಸುರಪುರ: ಯಾದಗಿರಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರನ್ನು ಭೇಟಿ ಮಾಡಿದ ಮುಖಂಡರು, ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಯಾದಗಿರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಹತ್ತಿಗುಡೂರದಿಂದ ಲಿಂಗಸುಗೂರವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಬೇಕು. ಎಲ್ಲ ಗ್ರಾಮಗಳಿಗೆ ವಿದ್ಯುತ್, ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಂಡಿರುವ ಅನೇಕ ಫಲಾನುಭವಿಗಳಿಗೆ ಇನ್ನೂ ಅನುದಾನ ಪಾವತಿಯಾಗಿಲ್ಲ. ಹೀಗಾಗಿ ಮನೆ ನಿರ್ಮಿಸಿರುವ ಎಲ್ಲ ಅರ್ಹರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುರಪುರ ಮತ್ತು ಹುಣಸಗಿ ತಾಲೂಕುಗಳಿಗೆ ಒಂದೇ ಡಿಸಿಸಿ ಬ್ಯಾಂಕ್ ಶಾಖೆ ಇರುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಹುಣಸಗಿ, ಕೆಂಭಾವಿ, ಕೊಡೇಕಲ್, ಕಕ್ಕೇರಾ ಹಾಗೂ ನಾರಾಯಣಪುರದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಯ್ಯಣ್ಣ ಹಾಲಬಾವಿ, ತಾಲೂಕ ಅಧ್ಯಕ್ಷ ಹಣಮಂತ್ರಾಯ ಚಂದಾಲಾಪುರ, ಕಾರ್ಯದರ್ಶಿ ವೆಂಕಟೇಶ ಗೌಡ ಕುಪಗಲ್, ತಿಪ್ಪಣ್ಣ ಜಂಪಾ, ತಿರುಪತಿ ಕುಪಗಲ್, ಮಲ್ಲಣ್ಣ ಹಾಲಬಾವಿ ಸೇರಿ ಅನೇಕರು ಉಪಸ್ಥಿತರಿದ್ದರು.






