ಸುರಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯ

ಮಲ್ಲಿಕಾರ್ಜುನ ಕ್ರಾಂತಿ
ಸುರಪುರ: ತಾಲೂಕಿನಲ್ಲಿ ಸಂಪೂರ್ಣ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುರಪುರವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಹಾಗೂ ರೈತರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸುರಪುರ ತಾಲೂಕಿನ ರೈತರು ಹೆಸರು, ಸೂರ್ಯಕಾಂತಿ, ತೊಗರಿ, ಶೇಂಗಾ, ಮೆಣಸಿನಕಾಯಿ, ಹತ್ತಿ ಸೇರಿದಂತೆ ವಿವಿಧ ಮುಂಗಾರು ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಮಳೆಯಿಲ್ಲದೆ ಬೆಳೆಗಳು ಬಾಡಿಹೋಗಿದ್ದು, ಕೆಲವೆಡೆ ಒಣಗಿ ನಿಂತಿವೆ. ಮಳೆ ಆಶ್ರಿತ ರೈತರು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದು, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಕೃಷಿಗೆ ಹಾಕಿರುವ ಬಂಡವಾಳವೂ ವಾಪಸ್ ಬರುವ ಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.
ರಸಗೊಬ್ಬರ, ಕೀಟನಾಶಕ, ಕಳೆ ತೆಗೆಯುವುದು, ಬಿತ್ತನೆ ಬೀಜ ಸೇರಿದಂತೆ ಕೃಷಿ ನಿರ್ವಹಣೆಗೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಕೂಲಿಕಾರರು ದೂರದ ಪಟ್ಟಣಗಳಿಗೆ ಎರಡು ಹೊತ್ತಿನ ಊಟಕ್ಕಾಗಿ ಕೆಲಸ ಅರಸಿ ವಲಸೆ ಹೋಗುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂಗಾರು ಮಳೆಯ ಕೊರತೆಯೂ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸುರಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಶಾಸಕರು ಸರ್ಕಾರಕ್ಕೆ ಒತ್ತಾಯಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯವಾಗಿ ರೈತರ ಸಾಲ ಮನ್ನಾ ಮಾಡಬೇಕು. ಮುಂದಿನ ಮುಂಗಾರು ಹಂಗಾಮಿಗೆ ರೈತರಿಗೆ ಉಚಿತ ಬೀಜ, ಗೊಬ್ಬರ ಹಾಗೂ ಕೀಟನಾಶಕ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮಲ್ಲಿಕಾರ್ಜುನ ಕ್ರಾಂತಿ ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ರೈತ ಸಂಘ ಸೇರಿದಂತೆ ಎಲ್ಲಾ ಸಂಘಟನೆಗಳ ಹಾಗೂ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಅವರು ಮನವಿ ಮಾಡಿದ್ದಾರೆ.






