ನ.30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಆಗ್ರಹ: ಸುರಪುರ ಬಂದ್ ಯಶಸ್ವಿ

ಸುರಪುರ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮುಂದುವರಿಸಲಾಗುವುದು ಎಂದು ಸಾಮೂಹಿಕ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ಸುರಪುರ ಬಂದ್ ಅಂಗವಾಗಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಭತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳಿಗೆ ಸದ್ಯ ನೀರಿನ ಅಗತ್ಯವಿದೆ. ಎರಡು ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಲಭ್ಯವಿದ್ದರೂ, ಸರ್ಕಾರ ರೈತರ ಬೆಳೆಗಳಿಗೆ ನೀರು ಹರಿಸದೆ ತೆಲಂಗಾಣಕ್ಕೆ ನೀರು ಹರಿಸುವ ಮೂಲಕ ರೈತ ವಿರೋಧಿ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗಲೂ ನೀರು ಹರಿಸದಿದ್ದರೆ ರೈತರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಆದ್ದರಿಂದ ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸುವ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು. ರೈತರಿಗೆ ಹಗಲಿನಲ್ಲಿ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಬೆಳೆಗಳು ಕಾಳು ಕಟ್ಟುವ ಪ್ರಮುಖ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನೀರಿನ ಅವಶ್ಯಕತೆಯಿದೆ. ಆದರೆ, ನವೆಂಬರ್ 12ರವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿರುವುದು ಅವೈಜ್ಞಾನಿಕವಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಯಾವುದೇ ಜಾತಿ, ಜನಾಂಗ ಹಾಗೂ ಪಕ್ಷದ ಭೇದವಿಲ್ಲದೆ ಅನ್ನದಾತರ ಪರವಾಗಿ ಹೋರಾಟ ನಡೆಸಲಾಗುತ್ತಿದೆ. ಜಲಾಶಯದಲ್ಲಿ ನೀರಿದ್ದರೂ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ರೈತರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಭಾಗದ ಸುರಪುರ, ಶಹಾಪುರ ಹಾಗೂ ಯಾದಗಿರಿ ಶಾಸಕರು ಮತ್ತು ಜೇವರ್ಗಿ ಕ್ಷೇತ್ರದ ಸಚಿವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೆ ಸಾಲದು. ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹೇರಿ ನೀರು ಹರಿಸುವಂತೆ ಮಾಡಬೇಕು. ಇಲ್ಲವಾದಲ್ಲಿ ಇಡೀ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಕರವೇ ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ವೇಣುಗೋಪಾಲ ಜೇವರ್ಗಿ, ವೇಣು ಮಾಧವ ನಾಯಕ, ಮಲ್ಲು ವಿಷ್ಣು ಸೇನಾ, ಲಕ್ಷ್ಮೀಕಾಂತ ಬಿರಾದಾರ್, ಶರಣುನಾಯಕ ಡೊಣ್ಣಿಗೇರಿ, ಉಸ್ತಾದ್ ವಜಾಹತ್ ಹುಸೇನ್, ತಿಮ್ಮಯ್ಯ ತಳವಾರ ಹಾಗೂ ಶಿವಕುಮಾರ್ ದೀವಳಗುಡ್ಡ ಸೇರಿದಂತೆ ಅನೇಕರು ಮಾತನಾಡಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಹುಸೇನ್ ಸಾಬ್ ಎ. ಸರಕಾವಸ್ ಅವರ ಮೂಲಕ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಪ್ರಮುಖರಾದ ರಾಜಾ ಹಣಮಪ್ಪ ನಾಯಕ, ಚಂದ್ರಶೇಖರ ಜಡೀಮರಳ್, ಶಂಕರ ನಾಯಕ, ಬಲಭೀಮನಾಯಕ ಬೈರಮರಡಿ, ನರಸಿಂಹ ಕಾಂತ ಪಂಚಮಗಿರಿ, ರಾಜಾ ರಂಗಪ್ಪ ನಾಯಕ, ಶ್ರೀನಿವಾಸ ನಾಯಕ ದರಬಾರಿ, ಶರಣು ನಾಯಕ ದೀವಳಗುಡ್ಡ, ವಿಷ್ಣು ಗುತ್ತೇದಾರ, ಭೀಮಾಶಂಕರ ಬಿಲ್ಲವ್, ನಿಂಗಪ್ಪ ನಾಯಕ ಬಿಜಾಸಪುರ, ಹೊನ್ನಪ್ಪ ತಳವಾರ, ಮಲ್ಲೇಶಿ ನಾಗರಾಳ, ರಾಜು ಪುಲ್ಸೆ ಸೇರಿದಂತೆ ಅನೇಕ ರೈತರು ಹಾಗೂ ಸಾಮೂಹಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಆಟೋ ರ‍್ಯಾಲಿ ನಡೆಸಲಾಯಿತು.
ಬಂದ್ ಅಂಗವಾಗಿ ಮಧ್ಯಾಹ್ನದವರೆಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದರು. ವಾಹನಗಳ ಸಂಚಾರ ಎಂದಿನಂತಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಉಮೇಶ ಎಂ. ನಾಯಕ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.






