ಯಾದಗಿರಿ: ಅಕ್ರಮ ಕೃತ್ಯಗಳಲ್ಲಿ ತೊಡಗಿದವರ ಪತ್ತೆಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೂಚನೆ

ಯಾದಗಿರಿ: ಸಾಮಾಜಿಕ ಜಾಲತಾಣವಾದ ವಾಟ್ಸ್ ಆ್ಯಪ್ ಮೂಲಕ ನಕಲಿ ಮೊಬೈಲ್ ಸಂಖ್ಯೆಯಿಂದ ಜಿಲ್ಲಾಧಿಕಾರಿಯ ಹೆಸರು ಮತ್ತು ಭಾವ ಚಿತ್ರವನ್ನು ಬಳಸಿ ಅಧಿಕಾರಿಗಳಿಂದ ಹಣ ಕೇಳಿರುವವರ ವಿರುದ್ಧ ಕಾನೂನು ಕ್ರಮಗೊಳ್ಳಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿಗಳ ಹೆಸರು ಮತ್ತು ಫೋಟೋ ಬಳಸಿ ಬೇರೆ ನಕಲಿ ಮೊಬೈಲ್ ಸಂಖ್ಯೆ 84922021308, 84886912413 ಮೂಲಕ ನಕಲಿ ಖಾತೆಗಳನ್ನು ರಚಿಸಿ ಜಿಲ್ಲೆಯಲ್ಲಿ ಇರುವ ವಿವಿಧ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶವನ್ನು ಕಳುಹಿಸುತ್ತಾ, ನಂತರ ಹಣವನ್ನು ವರ್ಗಾಯಿಸುವಂತೆ ತಿಳಿಸುತ್ತಿದ್ದು, ಈ ಮಾಹಿತಿ ಕುರಿತು ವಿವಿಧ ಅಧಿಕಾರಿಗಳು ದೂರವಾಣಿ ಮೂಲಕ ತಿಳಿಸಿರುವುದು ಕಂಡುಬಂದಿರುತ್ತದೆ.
ಜಿಲ್ಲೆಯಲ್ಲಿನ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಮೋಸದ ಉದ್ದೇಶದಿಂದ ನಕಲಿ ವಾಟ್ಸ್‌ಆ್ಯಪ್ ಮೊಬೈಲ್ ಸಂಖ್ಯೆಯ ಮೂಲಕ ಹಣವನ್ನು ವರ್ಗಾಯಿಸುವಂತೆ ಕೇಳುತ್ತಿರುವುದರಿಂದ ಜಿಲ್ಲಾಡಳಿತ ಗೌರವಕ್ಕೆ ಧಕ್ಕೆಯುಂಟಾಗುತ್ತಿದೆ. ಆದ್ದರಿಂದ ಇಂತಹ ಅಕ್ರಮ ಕೃತ್ಯಗಳಲ್ಲಿ ತೊಡಗಿರುವುವರನ್ನು ಪತ್ತೆ ಹಚ್ಚಿ ಭಾರತೀಯ ದಂಡ ಸಂಹಿತ ಹಾಗೂ ಮಾಹಿತಿ ತಂತ್ರ ಜ್ಞಾನ ಕಾಯ್ದೆ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





