ಯಾದಗಿರಿ | ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ: ಡಾ.ಮಹೇಶ ಬಿರಾದರ

ಯಾದಗಿರಿ: ಮಳೆಯಿಂದಾಗಿ ಕಲುಷಿತ ನೀರು ಸಂಗ್ರಹವಾಗಿ ಉತ್ಪತ್ತಿಯಾದ ಸೊಳ್ಳೆ ಡೆಂಗ್ಯೂನಂತಹ ರೋಗಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇದ್ದು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ್ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಡೆಂಗ್ಯೂ ಜ್ವರ ನಿಯಂತ್ರಣ ಮತ್ತು ಮುಂಜಾಗೃತ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯವಾಗಿ ಸೋಂಕಿತ ಈಡಿಸ್ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ ಜ್ವರ ಉಂಟಾಗುತ್ತದೆ. ವೈರಸ್ ದೇಹವನ್ನು ಪ್ರವೇಶಿಸಿದ ನಂತರ ಜ್ವರ, ತಲೆನೋವು ಮತ್ತು ಸ್ನಾಯು ನೋವಿನಂತಹ ಲಕ್ಷಣಗಳನ್ನು ಕಂಡು ಬರುತ್ತದೆ ಎಂದು ಹೇಳಿದರು.
ಈಡಿಸ್ ಈಜಿಪ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟಸ್ ಎಂಬ ಹೆಣ್ಣು ಸೊಳ್ಳೆಗಳು ಡೆಂಗ್ಯೂವನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಡಾ.ಮಹೇಶ ಬಿರಾದಾರ ವಿವರಿಸಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜಿದ್ ಮುದಸಿರ್ ಮಾತನಾಡಿ, ಡೆಂಗ್ಯೂ ಸೋಂಕಿತ ಸೊಳ್ಳೆಯು ವ್ಯಕ್ತಿಯನ್ನು ಕಚ್ಚಿದಾಗ, ಡೆಂಗ್ಯೂ ವೈರಸ್ ರಕ್ತಪ್ರವಾಹದಲ್ಲಿ ಸೇರಿ ಯಕೃತ್ತು ಮತ್ತು ಇತರ ಅಂಗಗಳಿಗೆ ಹರಡುತ್ತದೆ. ಡೆಂಗ್ಯೂ ವೈರಸ್‌ನ ನಾಲ್ಕು ವಿಭಿನ್ನ ಸಿರೊಟೈಪ್‌ಗಳಿವೆ. ಮೊದಲ ಸೋಂಕು ಒಂದು ನಿರ್ದಿಷ್ಟ ಸಿರೊಟೈಪ್‌ಗೆ ಜೀವಿತಾವಧಿಯ ಪ್ರತಿರಕ್ಷೆಯನ್ನು ನೀಡುತ್ತದೆ, ಆದರೆ ನಂತರದ ಸೋಂಕುಗಳು ತೀವ್ರ ರೋಗಲಕ್ಷಣಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ಹಣಮಂತ ರೆಡ್ಡಿ, ವೈದ್ಯಾಧಿಕಾರಿ ಡಾ ಶೀತಿಸ್, ಡಾ. ವಿನಿತಾ, ಡಾ ನಗರಾಜ ಗೌಳಿ, ಪರಿಸರ ಅಭಿಯಂತರರಾದ ಪ್ರಶಾಂತ , ಆರೋಗ್ಯ ನಿರೀಕ್ಷಕರಾದ ಶರಣಮ್ಮ, ಸಿದ್ದಾರ್ಥ ಮತ್ತು ಶ್ರೀಹರಿ, ಪ್ಯಾರಾ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.







