ದಲಿತರು ರಾಜಕೀಯವಾಗಿ ಬೆಳೆಯುವುದು ನಿಮಗಿಷ್ಟವಿಲ್ಲವೇ?: ಡಾ ಭೀಮಣ್ಣ ಮೇಟಿ

ಯಾದಗಿರಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿರುವ ಮೀಸಲಾತಿಯಡಿಯೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕರಾಗಿ ಗೆದ್ದು ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಹೇಳಿದರು.
ದಲಿತ ಸಮುದಾಯ ಬಾಂಧವರು ರಾಜಕೀಯವಾಗಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲಿ ಎಂಬ ಉದ್ದೇಶದಿಂದಾಗಿಯೇ ದೇಶದಲ್ಲಿ ಮೀಸಲಾತಿ ಕ್ಷೇತ್ರಗಳು ಮಾಡಲಾಗಿದೆ. ಚಿತ್ತಾಪುರ ವಿಧಾನಸಭೆ ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ ಅವರು ಸತತ ಮೂರನೇ ಬಾರಿಗೆ ಜನರ ಮೂಲಕವೇ ಗೆದ್ದು ಮಂತ್ರಿಯಾಗಿದ್ದಾರೆ. ಅವರೇನು ಹಿಂಬಾಗಿಲ ಮೂಲಕ ರಾಜಕೀಯ ಮಾಡುತ್ತಿಲ್ಲ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ನೀವು ಸೈದ್ಧಾಂತಿಕವಾಗಿ ರಾಜಕೀಯ ಮಾಡಬೇಕು. ಅದು ಬಿಟ್ಟು ದಲಿತ ಬಲಿತ ಎನ್ನುವ ಮೂಲಕ ವಯುಕ್ತಿಕವಾಗಿ ಟೀಕೆ ಮಾಡಬಾರದು. ನೀವು ಇಡೀ ದಲಿತ ಸಮುದಾಯ ಅವಮಾನ ಮಾಡಲು ಮುಂದಾಗಿರುವುದು ನಿಮಗೆ ಶೋಭೆ ತರುವುದಿಲ್ಲ. ತಾವು ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವವಿದೆ. ಹೀಗೆ ಮಾತನಾಡುವುದು ಸರಿಯಲ್ಲ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದಾರೆ. ಆದರೆ ದಲಿತರ ರಾಜಕೀಯವಾಗಿ ಬೆಳೆಯುತ್ತಿರುವುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಗುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಅವರು ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಸೈದ್ಧಾಂತಿಕವಾಗಿ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಎದರಿಸಲು ಪ್ರತಿಪಕ್ಷಗಳಿಗೆ ಆಗುತ್ತಿಲ್ಲ. ಹೀಗಾಗಿಯೇ ಅವರ ವಿರುದ್ಧ ಸುಳ್ಳು ಆರೋಪ ಮಾಡುವ ಜೊತೆಗೆ ವಯುಕ್ತಿಕ ಟೀಕೆ ಮಾಡುವ ಮೂಲಕ ತೇಜೋವಧೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇದು ಕುಗ್ಗಿಸುವಂತಹ ಕುತಂತ್ರವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಎಂದಿಗೂ ಹೆದರುವುದಿಲ್ಲ. ಅವರಿಂದ ಇಡೀ ಕಾಂಗ್ರೆಸ್ ಪಕ್ಷವೇ ನಿಂತಿದೆ ಎಂದು ಹೇಳಿದರು.






