ವೈದ್ಯಕೀಯ, ರಾಜಕೀಯದಲ್ಲಿ ಡಾ. ಮುದ್ನಾಳ ಸೇವೆ ಸ್ಮರಣೀಯ: ಸಚಿವ ಎಂ.ಬಿ. ಪಾಟೀಲ್

ಯಾದಗಿರಿ: ಕಾಯಕನಿಷ್ಠೆ, ಶಿಸ್ತು ಹಾಗೂ ಜನಸೇವೆಯ ಮೂಲಕ ವೈದ್ಯಕೀಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಮಾದರಿ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಾಜಿ ಶಾಸಕ ದಿವಂಗತ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರ 2ನೇ ಪುಣ್ಯಸ್ಮರಣೆ ಹಾಗೂ ಸಾಹಿತಿ ಡಾ. ಸುಭಾಷಚಂದ್ರ ಕೌಲಗಿ ಸಂಪಾದಿತ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜಯಪುರದ ಬಿಎಲ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಬಳಿಕ ರಾಜಕೀಯ ಪ್ರವೇಶಿಸಿ ಪಕ್ಷೇತರ ಶಾಸಕರಾಗಿ ಜನಪರ ಕಾರ್ಯಗಳಿಂದ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು ಎಂದು ಹೇಳಿದರು.
ಸಮಾಜದ ಒಳಿತಿಗಾಗಿ ದುಡಿದವರು ದೈಹಿಕವಾಗಿ ಅಗಲಿದರೂ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ನೇರ ನುಡಿ, ಸರಳ ವ್ಯಕ್ತಿತ್ವ ಹಾಗೂ ಹಾಸ್ಯಪ್ರಿಯ ಸ್ವಭಾವದಿಂದ ಡಾ. ಮುದ್ದಾಳ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ತಾವು ಇಲ್ಲಿ ಸಚಿವರಾಗಿ ಅಲ್ಲ, ಬಿಎಲ್‌ಡಿ ಸಂಸ್ಥೆಯ ಅಧ್ಯಕ್ಷರಾಗಿ ಬಂದಿರುವುದಾಗಿ ಹೇಳಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.
ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಹಾಗೂ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಮಾತನಾಡಿ, ಡಾ. ಮುದ್ನಾಳ ಅವರು ಜನಸಾಮಾನ್ಯರ ಶಾಸಕರಾಗಿದ್ದು, ಬಡ ರೋಗಿಗಳಿಗೆ ಸರಳ ಚಿಕಿತ್ಸೆಯ ಮೂಲಕ ಆಶಾಕಿರಣವಾಗಿದ್ದರು ಎಂದು ಸ್ಮರಿಸಿದರು.
ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಮಠಗಳ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಂಥ ಸಂಪಾದಕ ಡಾ. ಸುಭಾಷಚಂದ್ರ ಕೌಲಗಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಬಸವ ಸಮಿತಿ ಉಪಾಧ್ಯಕ್ಷ ಹಣಮಂತರೆಡ್ಡಿ ಮುದ್ನಾಳ, ಡಾ. ಸಂಗಮ್ಮ ಮುದ್ನಾಳ, ಡಾ. ಅಮೋಘ ಸಿದ್ದೇಶ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಭೀಮನಗೌಡ ಕ್ಯಾತನಾಳ, ಡಾ. ಬಸವರಾಜ ನರಸಣಗಿ, ಸಿದ್ದಪ್ಪ ಹೊಟ್ಟಿ, ಮಾರುತಿ ಕಲಾಲ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾರ, ಮಹಾದೇವಪ್ಪ ಆರ್. ಅಬ್ಬೆತುಮಕೂರು, ಸುರೇಶ ರಾಠೋಡ, ಡಾ. ಕ್ಷೀತಿಜ್ ನರಸಣಗಿ, ರಮೇಶ ದೊಡ್ಡಮನಿ, ಗುಂಡಪ್ಪ ಇಟಕಲ್ ಮುದ್ನಾಳ ಕುಟುಂಬದ ಸದಸ್ಯರು, ಅಭಿಮಾನಿಗಳು ಸೇರಿದಂತೆಯೇ ಇತರರಿದ್ದರು.
ಈ ವೇಳೆ ಗ್ರಂಥ ಸಂಪಾದಕ ಡಾ. ಕೌಲಗಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ. ಸಿದ್ದರಾಜರೆಡ್ಡಿ ನಿರೂಪಿಸಿದರು. ಸ್ವಾಗತ ವೀರಾರಡ್ಡಿ ಮುದ್ನಾಳ ಸ್ವಾಗತಿಸಿದರು. ಡಾ. ಶರಣಮ್ಮ ನರಸಣಗಿ ವಂದಿಸಿದರು.






