ಸುರಪುರದಲ್ಲಿ ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ: 20,246 ಮಂದಿಗೆ ನೋಟಿಸ್

ಸುರಪುರ: ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಸುರಪುರ ವಿಧಾನಸಭಾ ಕ್ಷೇತ್ರದ (36) ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 20,246 ಮತದಾರರಿಗೆ ನೋಟಿಸ್ ನೀಡಲಾಗುವುದು ಎಂದು ಮತದಾರರ ನೋಂದಣಾಧಿಕಾರಿ ವಿಜಯಕುಮಾರ ಮಡ್ಡೆ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದಿರುವುದು, ಹೆಸರು ಅಥವಾ ಪೋಷಕರ ಹೆಸರಿನ ವ್ಯತ್ಯಾಸ, ವಯಸ್ಸಿನ ಅಂತರ ಸೇರಿದಂತೆ ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿರುವ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಲಾಗುವುದು ಎಂದರು.
ತಹಸೀಲ್ದಾರ್ ಹೆಚ್.ಎ. ಸರಕಾವಸ್ ಮಾತನಾಡಿ, ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 2,43,530 ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉಳಿದ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ತಲುಪಿಸಲಾಗುವುದು. ನೋಟಿಸ್‌ನಲ್ಲಿ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ನಮೂದಿಸಲಾಗಿರುತ್ತದೆ ಎಂದು ತಿಳಿಸಿದರು.
ನೋಟಿಸ್ ಪಡೆದ ಮತದಾರರು ಸೂಕ್ತ ದಾಖಲೆಗಳೊಂದಿಗೆ ಬಿಎಲ್‌ಒ ಅಥವಾ ಸಂಬಂಧಪಟ್ಟ ಕಚೇರಿಗೆ ಹಾಜರಾಗಿ ತಮ್ಮ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನಿಗದಿತ ದಿನಾಂಕದಂದು ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತೊಂದು ಕಾಲಾವಕಾಶ ನೀಡಲು ಅವಕಾಶವಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ 8 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 325 ಮತಗಟ್ಟೆಗಳಿವೆ. ಅಲ್ಲದೆ 21 ಮತದಾರರ ಸಹಾಯಕ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೋಟಿಸ್ ಬಂದರೆ ಆತಂಕ ಬೇಡ :
2026ರ ಜೂನ್‌ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಸಂದರ್ಭದಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ತಿದ್ದುಪಡಿ ಕಾರಣದಿಂದ ಕರಡು ಪಟ್ಟಿಯಲ್ಲಿ ಹೆಸರು ಪ್ರಕಟವಾಗದಿದ್ದರೆ, ನೋಟಿಸ್ ಬಂದ ಮಾತ್ರಕ್ಕೆ ಮತದಾರರನ್ನು ಪಟ್ಟಿಯಿಂದ ಶಾಶ್ವತವಾಗಿ ಕೈಬಿಡಲಾಗಿದೆ ಎಂದರ್ಥವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಮತದಾರರು ಅನಗತ್ಯವಾಗಿ ಆತಂಕಪಡದೆ, ನೋಟಿಸ್‌ನಲ್ಲಿ ತಿಳಿಸಿರುವಂತೆ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹುಣಸಗಿ ತಹಶೀಲ್ದಾರ್ ಎಂ. ಬಸವರಾಜ, ಪ್ರಥಮ ದರ್ಜೆ ಸಹಾಯಕರಾದ ಶಿವುಕುಮಾರ ಹಾಗೂ ರವಿಕುಮಾರ ಉಪಸ್ಥಿತರಿದ್ದರು.






