ಕೇಂದ್ರದ ಮಾನದಂಡದಂತೇ ಬರ ಘೋಷಣೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್
ಗುರುಮಠಕಲ್, ಯಾದಗಿರಿ ಬರ ಪರಿಸ್ಥಿತಿ ಪರಿಶೀಲನೆ

ಯಾದಗಿರಿ: ಬರಪೀಡಿತ ತಾಲೂಕುಗಳ ಘೋಷಣೆ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರವಲ್ಲ. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಅಬ್ಬೆ ತುಮಕೂರು ಶ್ರೀ ವಿಶ್ವಾರಾಧ್ಯ ಮಠದ ಪಾದಗಟ್ಟಿ ಆವರಣದ ಎದುರಿನ ಬಯಲು ಜಾಗದಲ್ಲಿ ರವಿವಾರ ಶರಣ ಸಕ್ರೆಪ್ಪಗೌಡ ಗುರು ವಿಶ್ವಾರಾಧ್ಯ ಆಯುರ್ವೇದ ಕಾಲೇಜು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 101 ತಾಲೂಕುಗಳನ್ನು ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಈ ಪಟ್ಟಿಗೆ ಸೇರಿದೆ. ಉಳಿದ ತಾಲೂಕುಗಳ ಕುರಿತು ಎರಡನೇ ಹಂತದ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ವರದಿ ಆಧಾರದ ಮೇಲೆ ಮುಂದಿನ ಹಂತಗಳಲ್ಲಿ ಬರ ಪಟ್ಟಿಗೆ ಸೇರಿಸಲಾಗುವುದು ಎಂದರು.
ಮಳೆ ಪ್ರಮಾಣ, ಮಳೆ ಕೊರತೆಯ ಅವಧಿ, ಡ್ರೈ ಸ್ಪೆಲ್, ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಬರ ಘೋಷಣೆ ಮಾಡಲಾಗುತ್ತದೆ. ರೈನ್ ಗೇಜ್‌ಗಳಲ್ಲಿ ದಾಖಲಾಗುವ ಮಳೆಯ ಪ್ರಮಾಣ ಮತ್ತು ಸ್ಥಳೀಯ ಪರಿಸ್ಥಿತಿಯನ್ನು ಪರಿಗಣಿಸಿ ಕಂದಾಯ ಇಲಾಖೆ ನಿರ್ಧಾರ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಯಾದಗಿರಿ, ಗುರುಮಠಕಲ್, ಸುರಪುರ ಸೇರಿದಂತೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವ ತಾಲೂಕುಗಳ ಕುರಿತು ಸರ್ಕಾರದ ಗಮನದಲ್ಲಿದೆ. ಎರಡನೇ ಹಾಗೂ ಮೂರನೇ ಹಂತದಲ್ಲಿ ಅಗತ್ಯವಿರುವ ತಾಲೂಕುಗಳನ್ನು ಘೋಷಣೆ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.
ಕಾನೂನು ಪ್ರಕಾರ ಕ್ರಮ
ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಯಾವುದೇ ಸಂಘಟನೆ ಅಥವಾ ಸಿದ್ಧಾಂತದೊಂದಿಗೆ ಗುರುತಿಸಿಕೊಂಡು ಕರ್ತವ್ಯ ನಿರ್ವಹಿಸುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸರ್ಕಾರಿ ನೌಕರರು ತಮ್ಮ ಕರ್ತವ್ಯದಲ್ಲಿ ನಿಷ್ಪಕ್ಷಪಾತವಾಗಿರಬೇಕು. ವೈಯಕ್ತಿಕವಾಗಿ ಯಾವುದೇ ವಿಚಾರಧಾರೆ ಅನುಸರಿಸುವ ಸ್ವಾತಂತ್ರ್ಯವಿದ್ದರೂ, ಸರ್ಕಾರಿ ಹುದ್ದೆಯ ಜವಾಬ್ದಾರಿ ನಿರ್ವಹಿಸುವಾಗ ನಿಯಮ ಪಾಲನೆ ಮುಖ್ಯ ಎಂದು ಹೇಳಿದರು.
ಶಿಕ್ಷಕರ ಅಮಾನತು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಶರಣ ಪ್ರಕಾಶ್ ಪಾಟೀಲ್, “ಪ್ರಹ್ಲಾದ್ ಜೋಶಿ ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ಅಭಿವೃದ್ಧಿ ವಿಚಾರಗಳೇ ನಮ್ಮ ಆದ್ಯತೆ” ಎಂದರು.
ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುವುದಿಲ್ಲ. ಕಾನೂನು ಮೀರಿ ಯಾರೇ ನಡೆದುಕೊಂಡರೂ ಅವರ ವಿರುದ್ಧ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಅಮಾನತುಗೊಂಡ ಶಿಕ್ಷಕರು ನ್ಯಾಯಾಲಯದ ಮೊರೆ ಹೋದರೆ ಕಾನೂನು ತನ್ನದೇ ಆದ ರೀತಿಯಲ್ಲಿ ತೀರ್ಮಾನ ನೀಡುತ್ತದೆ. ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಎಂದರು.
ಬಿಜೆಪಿ ನಡೆಸುತ್ತಿರುವ ಬಳ್ಳಾರಿ ಪಾದಯಾತ್ರೆ ಕುರಿತು ಮಾತನಾಡಿದ ಸಚಿವರು, ವಿಧಾನಸಭೆಯಲ್ಲಿ ಯಾವುದೇ ವಿಷಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿತ್ತು. ಆದರೆ ಚರ್ಚೆ ನಡೆಸದೆ ಸದನದ ಸಮಯವನ್ನು ಘೋಷಣೆಗಳಲ್ಲೇ ಕಳೆದಿದ್ದಾರೆ ಎಂದು ಆರೋಪಿಸಿದರು.
ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣದಿಂದ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಬದಲು ರಾಜಕೀಯ ಆರೋಪಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ಇದ್ದರು.






