ಶಹಾಪುರ ಡಿಗ್ರಿ ಕಾಲೇಜು ಜಾಗದಲ್ಲೇ ಪ್ರಜಾಸೌಧ ನಿರ್ಮಿಸಲು ಡಿಎಸ್‌ಎಸ್ ಆಗ್ರಹ

ಶಹಾಪುರ: ಡಿಗ್ರಿ ಕಾಲೇಜು ವ್ಯಾಪ್ತಿಗೆ 84 ಎಕರೆ ಜಾಗವಿದ್ದು, ಅದರಲ್ಲಿ ಟೌನ್ ಹಾಲ್, ವಿವಿಧ ನಾಯಕರ ಮೂರ್ತಿಗಳು ನಿರ್ಮಾಣ, ಆಟದ ಮೈದಾನ ಸೇರಿದಂತೆ ಹಲವು ಕಾಮಗಾರಿಗಳು ಮಾಡಿದ್ದಾರೆ. ಆದರೆ ಕೇವಲ 4 ಎಕರೆ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಜನರು ತಡೆಯೊಡ್ಡಬಾರದು ಎಂದು ಆಗ್ರಹಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ನಾಗಣ್ಣ ಬಡಿಗೇರ, ಪ್ರಜಾಸೌಧ ನಿರ್ಮಾಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವುದು ತಪ್ಪು ತಿಳುವಳಿಕೆ. ವಿವಿಧ ಇಲಾಖೆಗಳ ಕಚೇರಿಗಳು ಒಂದೇ ಸೂರಿನಲ್ಲಿ ಬರುವುದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ. ಅಲೆದಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಟೌನ್ ಹಾಲ್ ನಿರ್ಮಾಣಕ್ಕಾಗಿ 4 ಎಕರೆ ಬಳಸಿ ನಿರ್ಮಿಸುವಾಗ ಪ್ರಶ್ನೆ ಮಾಡಲಿಲ್ಲ, ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ಅವರ ವಸತಿ ನಿಲಯಗಳು ಡಿಗ್ರಿ ಕಾಲೇಜಿನಿಂದ 6 ಕಿಲೋ ಮೀಟರ್ ದೂರದಿಂದ ನಡೆದುಕೊಂಡೇ ಕಾಲೇಜಿಗೆ ಬರುತ್ತಾರೆ ಅದು ಪ್ರತಿಭಟನೆಕಾರರಿಗೆ ಕಾಣಿಸಲಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.
ಸಾರ್ವಜನಿಕರ ಅನುಕೂಲಕ್ಕೆ ಇರುವ ಯೋಜನೆಯು ಎಲ್ಲರಿಗೂ ತಲುಪಲಿ ಎನ್ನುವುದು ನಮ್ಮ ಆಶಯ. ಆದ್ದರಿಂದ ಪ್ರಜಾಸೌಧ ಡಿಗ್ರಿ ಕಾಲೇಜು ಜಾಗದಲ್ಲೇ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮರಾಯ ಹೊಸಮನಿ, ಶಿವಪುತ್ರ ಜವಳಿ, ಮರೆಪ್ಪ ಕ್ರಾಂತಿ, ಮರೆಪ್ಪ ಕನ್ಯಾಕೋಳೂರು, ಶರಬಣ್ಣ ದೋರನಹಳ್ಳಿ, ಮರೆಪ್ಪ ಸಲಾದಾಪುರ, ಚಂದ್ರಕಾಂತ ಇಜೇರಿ, ಜಯರಡ್ಡಿ ಹೊಸಮನಿ, ಶರಣಪ್ಪ ಮದ್ದರಕಿ, ಮಾಲಪ್ಪ ಸಲಾದಾಪುರ, ಪುರುಷೋತ್ತಮ ಬಬಲಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







