ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಅಡಿಪಾಯ: ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನಗರ ಮತ್ತು ಗ್ರಾಮೀಣ ಭಾಗದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಬೇಕು ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ 54 ಲಕ್ಷ ರೂ. ವೆಚ್ಚದಲ್ಲಿ ನಗರದ ವಾಲ್ಮೀಕಿ ನಗರದಲ್ಲಿ ನಿರ್ಮಿಸಲಾಗಿರುವ ಮಶೇಮ್ಮ ಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಣದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಈಗಾಗಲೇ ಶೌಚಾಲಯ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರದಲ್ಲೇ ಕಂಪೌಂಡ್ ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಾಲ್ಮೀಕಿ ನಗರದಲ್ಲಿ ಪರಿಸರ ಸ್ವಚ್ಛತೆ ಕೊರತೆ ಇರುವುದನ್ನು ಗಮನಿಸಿದ್ದೇನೆ. ಸ್ಥಳೀಯರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶಾಲಾ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಈ ವಾರ್ಡ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ನಾನು ಎಲ್ಲ ವರ್ಗದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಕ್ಷೇತ್ರದಲ್ಲಿ ಶಾಂತಿ, ಸಾಮರಸ್ಯ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕಾನಳ್ಳಿ ಮಾತನಾಡಿ, ನೂತನ ಶಾಲೆಗೆ ಅಗತ್ಯ ಶಿಕ್ಷಕರು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ನಗರಸಭೆಯ ಮಾಜಿ ಸದಸ್ಯ ಹಣಮಂತ ನಾಯಕ ಮಾತನಾಡಿ, ಈ ಭಾಗದಲ್ಲಿ ಬಡ ಕುಟುಂಬಗಳು ಹೆಚ್ಚಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವ ನಿಟ್ಟಿನಲ್ಲಿ ಶಾಸಕರು ಅನುದಾನ ನೀಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಇದರಿಂದ ಸ್ಥಳೀಯರ ಬಹುದಿನಗಳ ಕನಸು ನನಸಾಗಿದೆ ಎಂದು ಹೇಳಿದರು.
ನಾಯಕ ಸಮಾಜದ ಯುವ ಮುಖಂಡ ನರಸಪ್ಪ ಬುಡ್ಡಯ್ಯನೋರ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 20 ವರ್ಷಗಳಿಂದ ಶಾಲೆ ನಿರ್ಮಾಣಕ್ಕಾಗಿ ಹೋರಾಟ ನಡೆಸಲಾಗುತ್ತಿದ್ದು, ಇಂದು ಅದು ಸಾರ್ಥಕವಾಗಿದೆ. ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ವೇದಿಕೆ ಮೇಲೆ ದಂಡ ಗುಂಡ ಬಸವಣ್ಣ ದೇವಸ್ಥಾನದ ಅರ್ಚಕರಾದ ಸಿದ್ದಯ್ಯಸ್ವಾಮಿ ಹಿರೇಮಠ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೈಲಾಸ್ ಅನ್ವಾರ್, ಇಂಜಿನಿಯರ್ ಪ್ರಭಾಕರ, ಶಿಕ್ಷಣ ಇಲಾಖೆಯ ಶರಣಗೌಡ ಪಾಟೀಲ್, ಮಲ್ಲಪ್ಪ, ಮುಖಂಡರಾದ ಬಸವರಾಜಪ್ಪ ಬುಡ್ಡಯ್ಯನೋರ, ವಿಜಯಲಕ್ಷ್ಮಿ, ಕೃಷ್ಣಾ ನಾನೆಕಾರ, ಮುಖ್ಯ ಗುರುಗಳಾದ ಸುರೇಖಾ ಪಂಚಾಳ, ರೇಣುಕಾ ಮೋನಪ್ಪ ಹಳಿಗೇರ, ವಿಶ್ವನಾಥ ನಾಯಕ, ಹಣಮಂತ ನಿಶಾನಿ, ದೇವಿಂದ್ರಪ್ಪ ಬುಡ್ಡಯ್ಯನೋರ, ಚಂದಪ್ಪ ಅಕ್ಕನೋರ, ನಾಗಪ್ಪ ಪಿಲ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






