ಯಾದಗಿರಿ ಜಿಲ್ಲೆಯಾದ್ಯಾಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಯಾದಗಿರಿ: ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಕಳೆದ ಒಂದು ತಿಂಗಳ ಕಾಲ ಮುಂಜಾನೆಗಳಿಂದಲೇ ಆಹಾರ-ನೀರು ಸೇವಿಸದೆ ರೋಜಾ ಆಚರಿಸಿದ್ದ ಜನರು, ಉಪವಾಸ ಮುಗಿಸಿ ಹೊಸ ಬಟ್ಟೆಗಳನ್ನು ಧರಿಸಿ ಸಾವಿರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಆಲಿಂಗನ ಮಾಡಿಕೊಂಡು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ಬಂಧು-ಬಳಗ ಹಾಗೂ ಸ್ನೇಹಿತರ ಮನೆಗಳಿಗೆ ತೆರಳಿ ಸಿಹಿ ತಿಂಡಿಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
ನಗರದ ಎರಡು ಈದ್ಗಾ ಮೈದಾನಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ದೊಡ್ಡ ಸಂಖ್ಯೆಯ ಸಮಾಗಮ ಕಂಡುಬಂದಿತು. ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ, ಸೈದಾಪುರ, ಹುಣಸಗಿ, ಕೆಂಭಾವಿ, ನಾರಾಯಣಪುರ, ಕೊಡೆಕಲ್, ಭೀಮಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿಯೂ ರಂಜಾನ್ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
Next Story




