ಕಳ್ಳಬಟ್ಟೆ ಸರಾಯಿ, ಸೇಂದಿ ಮಾರಾಟಗಾರರನ್ನು ಗಡಿಪಾರು ಮಾಡಿ: ಅಧಿಕಾರಿಗಳಿಗೆ ಅಬಕಾರಿ ಸಚಿವ ತಿಮ್ಮಾಪುರ ಖಡಕ್ ಸೂಚನೆ

ಯಾದಗಿರಿ: ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕಳ್ಳಬಟ್ಟಿ, ಸೇಂದಿ ತಯಾರಕೆಗೆ ಬಳಸುವ ಸಿಎಚ್ ಪೌಢರ್ ಬಳಕೆ ನಿಷೇಧಿಸುವತ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಇದರಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಡಿಪಾರು ಮಾಡಬೇಕೆಂದು ಅಬಕಾರಿ ಸಚಿವ ಆರ್. ಬಿ.ತಿಮ್ಮಾಪುರ ಅವರು ಅಧಿಕಾರಿಗಳಿಗೆ ಖಡಕ್ ಸೂಚಿಸಿದ್ದಾರೆ.
ಅಬಕಾರಿ ಇಲಾಖೆ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಆರ್. ಬಿ.ತಿಮ್ಮಾಪುರ, ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಸೇಂದಿ, ಸಿಎಚ್ ಪೌಡರ್ ಮತ್ತು ಕಳಬಟ್ಟೆ ಸರಾಯಿ ಹೆಚ್ಚು ತಯಾರಿಸಿ ಮಾರಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕವಾಗಲಿದೆ. ಕಳೆದ ಸಭೆಯಲ್ಲಿ ಇಂತಹವುಗಳನ್ನು ತಡೆಯುವಂತೆ ಹೇಳಲಾಗಿತ್ತು. ಆದರೆ ನಿಗದಿತ ಗುರಿಯನ್ನು ತಲುಪಿಲ್ಲ ಎಂದು ಸಚಿವರು ಈ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರೀತಿ ಅಕ್ರಮ ಸರಾಯಿ, ಸೇಂದಿ ಮಾರಾಟವಾದರೆ ಜನರ ಆರೋಗ್ಯ ಹಾಳಾಗುತ್ತದೆ ಮತ್ತು ಸರಕಾರಕ್ಕೆ ಇಲಾಖೆಯಿಂದ ತೆರಿಗೆ ನಷ್ಟವಾಗುತ್ತದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದರು.
ಯಾದಗಿರಿ ನಗರದಲ್ಲಿ ಸ್ಥಳವೊಂದರಲ್ಲಿ ಕಳ್ಳಬಟ್ಟಿ ಸರಾಯಿ, ಸೇಂಧಿಯನ್ನು ತಯಾರಿಸಿ ಒಂದು ಬ್ಯಾರಲ್ ಸಂಗ್ರಹಿಸಿ ಟೆರಸ್ ಮೇಲೆ ಇಟ್ಟು ಪೈಪ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ಸಚಿವರ ಸಮ್ಮುಖದಲ್ಲಿಯೇ ಗಂಭೀರವಾಗಿ ಆರೋಪಿಸಿದರು.





