ಯಾದಗಿರಿ| ಕೃಷಿ ಸಾಲದ ಹೊರೆ ನಡುವೆ ಬೆಳೆ ನಷ್ಟದ ಭೀತಿ: ನ.25ರವರೆಗೆ ನೀರು ಹರಿಸುವಂತೆ ರೈತ ಮುಖಂಡರ ಒತ್ತಾಯ

ಹುಣಸಗಿ: ವಾರಬಂದಿ ಪದ್ಧತಿಯನ್ನು ರದ್ದುಗೊಳಿಸಿ, ನವೆಂಬರ್ 25ರವರೆಗೆ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮುದನೂರಿನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮಲ್ಲನಗೌಡ ನಗನೂರ ಹಾಗೂ ಬಿಜೆಪಿ ಮುಖಂಡ ಕೃಷ್ಣಾರಡ್ಡಿ ಮುದನೂರ ಮಾತನಾಡಿ, ಕೆಲ ದಿನಗಳ ಹಿಂದೆ ನಡೆದ ಸಲಹಾ ಸಮಿತಿ ಸಭೆಯಲ್ಲಿ ವಾರಬಂದಿ ಪದ್ಧತಿಯ ಮೂಲಕ ನವೆಂಬರ್ 12ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸಲು ನಿರ್ಧರಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಭತ್ತ, ಶೇಂಗಾ, ಸೂರ್ಯಕಾಂತಿ, ಸಜ್ಜಿ, ಹತ್ತಿ ಹಾಗೂ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಹೂ ಬಿಡುವ ಹಂತದಲ್ಲಿದ್ದು, ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಬೆಳೆಗಳು ಒಣಗಿ ರೈತರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಈಗಾಗಲೇ ಕೃಷಿಗಾಗಿ ಸಾಲ ಮಾಡಿರುವ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರ ಬೆಳೆಗಳ ರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳ ಹಿತದೃಷ್ಟಿಯಿಂದ ಕೂಡಲೇ ವಾರಬಂದಿ ಪದ್ಧತಿಯನ್ನು ರದ್ದುಗೊಳಿಸಬೇಕು. ನವೆಂಬರ್ 25ರವರೆಗೆ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವ ಮೂಲಕ ರೈತರಿಗೆ ಆಗಬಹುದಾದ ನಷ್ಟವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷ್ಣಾರಡ್ಡಿ ಮುದನೂರ, ಮಲ್ಲಿಕಾರ್ಜುನ ರೆಡ್ಡಿ ಚೌದ್ರಿ, ಬಸನಗೌಡ ಪಡೆಕನೂರ, ಶಾಂತಾರೆಡ್ಡಿ ಚೌದ್ರಿ, ಸಿದ್ದನಗೌಡ ಯಡಿಯಾಪೂರ, ಶಿವರೆಡ್ಡಿ ಯಡಹಳ್ಳಿ, ಬಸಣ್ಣ ನಾಟೇಕಾರ, ಗೌಡಪ್ಪಗೌಡ ನಿರಲಗಿ, ಸಿದ್ದನಗೌಡ ಬಳವಾಟ, ರಾಜಶೇಖರ ದೇಸಾಯಿ, ಸತೀಶ ರಸ್ತಾಪೂರ, ಹಣಮಂತರೆಡ್ಡಿ ಕಡಕಲ್ಲ, ಬಾಪುಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






