ಸುರಪುರ: ರಸಗೊಬ್ಬರಕ್ಕೆ ಆಗ್ರಹಿಸಿ ರೈತ ಸಂಘ ಧರಣಿ

ಸುರಪುರ: ರೈತರು ರಸಗೊಬ್ಬರಕ್ಕಾಗಿ ನಿತ್ಯವು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಬೇಕಾದಷ್ಟು ರಸಗೊಬ್ಬರ ಕೊಡದಿದ್ದಲ್ಲಿ ರೈತ ಸಂಘ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಹಣಮಂತ್ರಾಯ ಮಡಿವಾಳ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಸಮಿತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ, ರಸಗೊಬ್ಬರ ಅಂಗಡಿಗಳಲ್ಲಿ ಹೋದರೆ ಅವರು ಹೇಳಿದಷ್ಟು ಗೊಬ್ಬರ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಅಲ್ಲದೆ ನ್ಯಾನೋ ಗೊಬ್ಬರ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಾರೆ. ಅದರಿಂದ ಬೆಳೆಗಳಿಗೆ ಸಮರ್ಪಕವಾದ ಪೋಷಕಾಂಶ ದೊರೆಯುವುದಿಲ್ಲ, ಆದರೆ ಬಲವಂತದಿಂದ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ರೈತರ ನೆರವಿಗೆ ಬರಬೇಕು. ಜಿಲ್ಲೆಯ ರೈತರಿಗೆ ಬೇಕಾದಷ್ಟು ಗೊಬ್ಬರ ದೊರೆಯಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಹುಣಸಗಿ ತಾಲ್ಲೂಕ ಗೌರವಾಧ್ಯಕ್ಷ ಸಾಹೇಬಗೌಡ ಮದಲಿಂಗನಾಳ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿ ಮುಖಂಡ ಕೊಟ್ರೇಶ ಚೌದ್ರಿ,ಉಸ್ತಾದ ವಜಾಹತ್ ಹುಸೇನ್ ಇತರರು ಮಾತನಾಡಿದರು. ನಂತರ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಬರೆದ ಮನವಿ ಕೃಷಿ ಉಪ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸುರಪುರ ತಾ. ಅಧ್ಯಕ್ಷ ಮಲ್ಲಣ್ಣ ಹಾಲಬಾವಿ,ಹುಣಸಗಿ ತಾ. ಅಧ್ಯಕ್ಷ ಹನುಮಗೌಡ ನಾರಾಯಣಪುರ,ವೆಂಕಟೇಶ ಕುಪಗಲ್,ದೇವಿಂದ್ರಪ್ಪ ತಿಪ್ಪನಟಗಿ, ಭೀಮಣ್ಣ ತಿಪ್ಪನಟಗಿ,ಭೀಮನಗೌಡ ಕರ್ನಾಳ,ಶಿವನಗೌಡ ರುಕ್ಮಾಪುರ,ನಾಗಪ್ಪ ಕುಪಗಲ್,ತಿಪ್ಪಣ್ಣ ಜಂಪಾ,ಇಮಾಮಸಾಬ್,ಚಂದ್ರಶೇಖರ ಸೇರಿದಂತೆ ಅನೇಕ ಜನ ರೈತರು ಭಾಗವಹಿಸಿದ್ದರು.







