Yadgir | ಸುರಪುರ, ಹುಣಸಗಿ ಬರಪೀಡಿತ ತಾಲೂಕು ಘೋಷಣೆಗೆ ರೈತ ಸಂಘ ಅಗ್ರಹ

ಹುಣಸಗಿ: ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರವೊಂದನ್ನೇ ಬರಪೀಡಿತ ಎಂದು ಘೋಷಿಸಿರುವ ರಾಜ್ಯ ಸರ್ಕಾರ, ಯಾದಗಿರಿ ಜಿಲ್ಲೆಯ ಉಳಿದ ಕ್ಷೇತ್ರಗಳ ರೈತರಿಗೆ ಅನ್ಯಾಯ ಮಾಡಿದೆ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸಿ ಸುರಪುರ ಹಾಗೂ ಹುಣಸಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೊಷಿಸಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಮನವಿ ಪತ್ರವನ್ನು ತಹಸೀಲ್ದಾರ ಎಂ ಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲನಗೌಡ ನಗನೂರ ಮಾತನಾಡಿ, ನೆರೆಯ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಯಾದಗಿರಿ ಜಿಲ್ಲೆಯಲ್ಲಿ ಕೇವಲ ಶಹಾಪುರ ಕ್ಷೇತ್ರವನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿನ ಸುಣ್ಣ ಹಚ್ಚಲಾಗಿದೆ.
ಸುರಪುರ ಹಾಗೂ ಹುಣಸಗಿ ತಾಲೂಕುಗಳಲ್ಲಿಯೂ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಮಳೆ ಕೊರತೆಯಿಂದ ಬೆಳೆಗಳು ಕೈಕೊಟ್ಟ ಪರಿಣಾಮ ಹಲವು ಕಡೆ ಬೀಜಗಳು ಮೊಳಕೆಯೊಡೆಯದೇ ನಷ್ಟವಾಗಿದೆ. ಮೊಳಕೆಯೊಡೆದ ಬೆಳೆಗಳೂ ನೀರಿನ ಕೊರತೆಯಿಂದ ಒಣಗಿ ಹೋಗಿದ್ದು, ರೈತರ ಪರಿಸ್ಥಿತಿ ಹೇಳತೀರದಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಸುರಪುರ ಹುಣಸಗಿ ಕ್ಷೇತ್ರಗಳನ್ನೂ ಬರಪೀಡಿತವೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಶಾಸಕರು, ಸಚಿವರು ಹಾಗೂ ಸಂಸದರು ಸರ್ಕಾರದ ಗಮನ ಸೆಳೆದು ಧ್ವನಿ ಎತ್ತಬೇಕು. ಬರದ ತೀವ್ರತೆಯನ್ನು ಪರಿಗಣಿಸಿ ಯಾವುದೇ ತಾರತಮ್ಯವಿಲ್ಲದೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ರೈತರಿಗೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸನಗೌಡ ಪಡೆಕನೂರ,ಗೌಡಪ್ಪಗೌಡ ನಿರಲಗಿ,ಮಹೆಬೂಬ ಚೌದ್ರಿ,ನಾಗರೆಡ್ಡಿ ಚೌದ್ರಿ,ಅಮರೇಶ ಬಿರದಾರ,ದ್ಯಾಮಣ್ಣ ರಾಯನಪಾಳೆ,ಸತೀಶ ರಸ್ತಾಪೂರ,ಶರಗೌಡ ಬಾದ್ಲಾಪೂರ,ಮಲ್ಲನಗೌಡ ಕೊಂಗಂಡಿ,ಸಂತೋಷ ತಳವಾರ,ಗುರಣ್ಣ ಹೊನ್ನಳಿ,ಅಮೃತ ರಸ್ತಾಪೂರ,ಗುರಣ್ಣ ಸಿಂಪಿಗೇರ,ಬಸವರಾಜ ಅರಳಿ,ಪರಶು ಅರಳಿ,ಪ್ರಕಾಶರೆಡ್ಡಿ ಚೌದ್ರಿ,ಸೋಮು ಹೊರಟ್ಟಿ,ರವಿ ಕೋಳೂರ ಸೇರಿದಂತೆ ಇನ್ನಿತರರು ಇದ್ದರು.






