ಯಾದಗಿರಿಯಲ್ಲಿ ವಂದೇ ಭಾರತ ರೈಲು ನಿಲ್ಲಿಸದಿದ್ದರೆ ಹಳಿಗಳ ಮೇಲೆ ಹೋರಾಟ: ಭೀಮುನಾಯಕ ಎಚ್ಚರಿಕೆ

ಯಾದಗಿರಿ: ಬೆಂಗಳೂರು ಮುಂಬೈ ವಂದೇ ಭಾರತ ರೈಲನ್ನೂ ಸಹ ಯಾದಗಿರಿಯಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಕಲ್ಬುರ್ಗಿ-ಬೆಂಗಳೂರು ವಂದೇ ಭಾರತ ರೈಲು ಯಾದಗಿರಿಯಲ್ಲಿ ನಿಲುಗಡೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ ರೈಲು ಸಹ ನಿಲುಗಡೆಗೆ ರೈಲ್ವೆ ಇಲಾಖೆ ಸಚಿವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಾಗಿ ಸುಮಾರು 16 ವರ್ಷಗಳೇ ಕಳೆಯುತ್ತಿದ್ದರೂ ಇದುವರೆಗೆ ಇನ್ನು 14 ಪ್ರಮುಖ ರೈಲುಗಳು ನಿಲುಗಡೆ ಆಗುತ್ತಿಲ್ಲ. ಹೀಗಾದರೆ ಜಿಲ್ಲೆಯ ಅಭ್ಯುದಯವಾಗುವುದಾದರೂ ಹೇಗೆ? ಮಹತ್ವಾಕಾಂಕ್ಷಿ ಜಿಲ್ಲೆಯ ಬೆಳವಣಿಗೆ ಆಗುವುದಾದರೂ ಯಾವಾಗ ಎಂದು ಅವರು ಪ್ರಶ್ನಿಸಿದ್ದಾರೆ.
ಕೂಡಲೇ ಕೇಂದ್ರ ಸರ್ಕಾರ, ರೈಲ್ವೆ ಸಚಿವರು, ನಮ್ಮ ಜಿಲ್ಲೆಯ ರಾಯಚೂರು, ಕಲ್ಬುರ್ಗಿ ಸಂಸದರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಂದೇ ಭಾರತ ರೈಲು ನಿಲುಗಡೆಗೆ ಕ್ರಮ ವಹಿಸಬೇಕು. ವೇಳಾಪಟ್ಟಿ ಪ್ರಕಟವಾಗುವ ಮೊದಲೇ ಈ ಕ್ರಮಕ್ಕೆ ಎಲ್ಲರೂ ಒಮ್ಮತದಿಂದ ಶ್ರಮಿಸಬೇಕೆಂದು ಕರೆ ನೀಡಿದ್ದಾರೆ.




