ಕೂಲಿ ಕಾರ್ಮಿಕರು ನಗರಕ್ಕೆ ಬಾರದೆ ಸ್ವಗ್ರಾಮದಲ್ಲೇ ಕೆಲಸ ಪಡೆಯಿರಿ: ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ

ಯಾದಗಿರಿ: ಕೂಲಿ ಕಾರ್ಮಿಕರು ನಗರದಲ್ಲಿ ಕೆಲಸಕ್ಕಾಗಿ ಕಾಯುತ್ತಾ ನಿಲ್ಲುವ ಅಗತ್ಯವಿಲ್ಲ ನಿಮ್ಮ ಸ್ವಂತ ಗ್ರಾಮ ಪಂಚಾಯಿತಿಯಲ್ಲೇ ವಿಬಿ-ಜಿ ರಾಮ್ ಜಿ ಯೋಜನೆಯಡಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಿ ಎಂದು ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಕೂಲಿ ಕಾರ್ಮಿಕರಿಗೆ ಸಲಹೆ ನೀಡಿದರು.
ಅವರು ಯಾದಗಿರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆಲಸಕ್ಕಾಗಿ ಕಾಯುತ್ತಿದ್ದ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ವಿಬಿ-ಜಿ ರಾಮ್ ಜಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಾರ್ಮಿಕರು ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ ನೀಡಲಾಗುತ್ತಿದ್ದು, ಪ್ರತಿದಿನಕ್ಕೆ ರೂ. 382 ದಿನಗೂಲಿ ನಿಗದಿಪಡಿಸಲಾಗಿದೆ. ಕೆರೆ ಅಭಿವೃದ್ಧಿ, ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಸಸಿ ನೆಡುವಿಕೆ ಹಾಗೂ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ದನದ ಕೊಟ್ಟಿಗೆ ಮತ್ತು ಕೋಳಿ ಸಾಕಾಣಿಕೆ ಶೆಡ್‍ಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಅರ್ಹ ಕಾರ್ಮಿಕರಿಗೆ ಕೂಡಲೇ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಾರ್ಮಿಕರ ಪಟ್ಟಿ ಸಿದ್ಧಪಡಿಸಿ ಕೆಲಸ ದೊರಕುವಂತೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ವಗ್ರಾಮದಲ್ಲೇ ಉದ್ಯೋಗ ದೊರೆಯುವುದರಿಂದ ಕಾರ್ಮಿಕರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಆರ್ಥಿಕ ಭದ್ರತೆಗೆ ಹೆಚ್ಚಿನ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.






