ತೆಲಂಗಾಣಕ್ಕೆ ಅಕ್ರಮವಾಗಿ ನೀರು ಹರಿಸಿದ ವಿವರ ಕೊಡಿ: ಭೀಮುನಾಯಕ ಒತ್ತಾಯ

ಯಾದಗಿರಿ: ನೀರಾವರಿ ಸಲಹಾ ಸಮಿತಿ ಐಸಿಸಿ ಸಭೆಯಲ್ಲಿ ಕೈಗೊಂಡ ತೀರ್ಮಾನ ಅವೈಜ್ಞಾನಿಕವಾಗಿದ್ದು, ರೈತರಿಗೆ ಅನ್ಯಾಯವಾಗಿದೆ, ಇದರ ವಿರುದ್ಧ ಜಿಲ್ಲೆಯ ಶಾಸಕರು ಸಚಿವರು ದನಿ ಎತ್ತದೇ ಅನ್ಯಾಯವಾಗಿದ್ದರೂ ತೆಪ್ಪಗಿರುವುದು ನಾಚಿಕೆಗೇಡು ಸಂಗತಿಯಾಗಿದೆ. ತಕ್ಷಣ ಎಪ್ರಿಲ್ 15ರವರೆಗೆ ನೀರು ಹರಿಸಲು ಒತ್ತಡ ಹೇರುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಐಸಿಸಿ ಸಭೆಯಲ್ಲಿ ಎಪ್ರಿಲ್ 6 ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇದು ಕೊನೆ ಭಾಗದ ರೈತರಿಗೆ ಸುಣ್ಣ ತಮ್ಮಭಾಗದ ರೈತರಿಗೆ ಬೆಣ್ಣೆ ಎಂಬಂತೆ ತೀರ್ಮಾನ ಕೈಗೊಂಡು ನೀರಾವರಿ ಸಲಹಾ ಸಮಿತಿ ಅನ್ಯಾಯ ಮಾಡಿದರೂ ಯಾವುದೇ ದನಿ ಎತ್ತದ ಜನಪ್ರತಿನಿಧಿಗಳಿಂದಲೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಸಭೆಯಲ್ಲಿ ಎ. 1 ರಿಂದ ಎ.6 ರರವರೆಗೆ ಮಾತ್ರ ನೀರು ಹರಿಸಲಾಗುವುದು ಎಂದು ಸಭೆ ನಿರ್ಣಯಿಸಿರುವುದು ಜಿಲ್ಲೆಯ ವಡಗೇರಿ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ನೀರು ಹರಿಸಿದ ಮೇಲೆ ಕೊನೆ ಭಾಗಕ್ಕೆ ತಲುಪುವ ಮೊದಲೇ ನೀರು ಬಂದ್ ಮಾಡಲಾಗುತ್ತದೆ ಇದರಿಂದ ಮೇಲ್ಬಾಗದ ರೈತರಿಗೆ ಬೆಣ್ಣೆ ಕೊನೆ ಭಾಗದ ರೈತರಿಗೆ ಸುಣ್ಣ ಕೊಟ್ಟಂತೆಯೇ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಟ ಎಪ್ರಿಲ್ ಕೊನೆಯವರೆಗೆ ನೀರು ಹರಿಸಿದ್ದರೆ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು. ಆದರೆ ಜಿಲ್ಲೆಯ ಶಾಸಕರು ಅದರಲ್ಲೂ ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹಾಗೂ ಏಕೈಕ ವಿಪಕ್ಷ ಶಾಸಕ ಶರಣಗೌಡ ಕಂದಕೂರು ಸಭೆಯಲ್ಲಿ ಭಾಗವಹಿಸಿ ರೈತರ ಪರ ದನಿ ಎತ್ತಬೇಕಿತ್ತು ಆದರೆ ಸಭೇಗೇ ಗೈರಾಗುವ ಮೂಲಕ ಜಿಲ್ಲೆಗೆ ಅನ್ಯಾಯವಾಗುವ ನಿರ್ಣಯಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ಧಾರೆ.
ಅಕ್ರಮವಾಗಿ ನೀರು ಹರಿಸಿ ನಮ್ಮ ಭಾಗದ ರೈತರ ಈ ಭಾಗದ ಜನರ ಕುಡಿವ ನೀರಿನ ಹಕ್ಕು ಕಸಿದು ತೆಲಂಗಾಣಕ್ಕೆ ಕೊಟ್ಟ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದೂ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವೆಂಕಟೇಶನಾಯಕ ಬೈರಿಮಡ್ಡಿ, ಬಸವರಾಜ ಚೆನ್ನೂರು, ಅಬ್ದುಲ್ ಚಿಗಾನೂರು, ಸುರೇಶ ಬೆಳಗುಂದಿ ಒತ್ತಾಯಿಸಿದ್ದಾರೆ.







