ಭಾರತ ಸರಕಾರದ ವಾರ್ತಾ ಶಾಖೆ ಬೆಂಗಳೂರು ವತಿಯಿಂದ ಯಾದಗಿರಿಯಲ್ಲಿ ʼವಾರ್ತಾಲಾಪʼ ಆಯೋಜನೆ

ಯಾದಗಿರಿ: ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ)., ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘ (ರಿ) ಹಾಗೂ ಜಿಲ್ಲಾ ಘಟಕ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಯಾದಗಿರಿಯ ಎಸ್‌ಡಿಎನ್ ಹೋಟೆಲ್ ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ “ವಾರ್ತಾಲಾಪ” ಕಾರ್ಯಾಗಾರವನ್ನು ಯಾದಗಿರಿ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಉದ್ಘಾಟಿಸಿದರು.
ಈ ವೇಳೆ ಶಾಸಕರಾದ ಚೆನ್ನಾರೆಡ್ಡಿ ಅವರು ಮಾತನಾಡಿ, ಪತ್ರಕರ್ತರಿಗೆ ಈ ಕಾರ್ಯಾಗಾರ ಆಯೋಜಿಸಿರುವುದು ಬಹಳ ಸಂತೋಷದ ಸಂಗತಿ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ ವಾರ್ತಾಲಾಪ ಕಾರ್ಯಾಗಾರವು ಬಹಳ ಅನುಕೂಲಕರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚುರಪಡಿಸುವುದರಿಂದ ಎಲ್ಲ ಫಲಾನುಭವಿಗಳಿಗೂ ಸರ್ಕಾರದ ಯೋಜನೆಗಳು ತಲುಪಲಿವೆ ಎಂದು ತಿಳಿಸಿದರು.
ಬಹುತೇಕ ಹಳ್ಳಿಗಳಲ್ಲಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಜನರಿಗೆ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಇದು ಸರ್ಕಾರದ ಒಂದು ಅತ್ಯುತ್ತಮ ಕಾರ್ಯವಾಗಿದೆ. ಇದೇ ರೀತಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಲವು ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಲಿ ಎಂದು ಆಶಿಸಿದರು.
ಭಾರತ ಸರ್ಕಾರದ ವಾರ್ತಾ ಶಾಖೆಯ, ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕರಾದ ಎಸ್.ಜಿ. ರವೀಂದ್ರ ಅವರು ಕಾರ್ಯಾಗಾರದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮಾತನಾಡಿ, ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಯಾದಗಿರಿ ಇದೆ. ಇದು ಕೃಷಿಯಾಧಾರಿತ ಜಿಲ್ಲೆಯಾಗಿದ್ದು, ಇಲ್ಲಿನ ಸುಸ್ಥಿರ ಕೃಷಿ, ತೋಟಗಾರಿಕೆ, ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ಈ ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ದೊರಕಲಿದೆ. ಈ ಕಾರ್ಯಾಗಾರ ಮಹತ್ವದಾಗಿದ್ದು, ಇದರ ಜೊತೆಗೆ ಉದ್ಯೋಗಾವಕಾಶ, ಜೀವ ವಿಮೆ, ಶಿಕ್ಷಣ, ಆರೋಗ್ಯ, ಯುವ ಸಬಲೀಕರಣ ಮುಂತಾದ ಕ್ಷೇತ್ರಗಳ ಜನಪರ ಯೋಜನೆಗಳ ಮಾಹಿತಿಗಳನ್ನು ಪತ್ರಕರ್ತರು ತಿಳಿದುಕೊಂಡು ಅದನ್ನು ಜನರಿಗೆ ಮುಟ್ಟಿಸುವುದು ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬೂರಾವ್ ಕಾಡ್ಲೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುಲೈಮಾನ್ ಡಿ. ನದಾಫ್, ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಲಿಂಗೇರಿ ಅವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಯಾದಗಿರಿ ಜಿಲ್ಲೆಯ ನೂರಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.







