Gurmatkal | ಕಿಲ್ಲನಕೇರಾ ಗ್ರಾಮದಲ್ಲಿ ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ತಮಟೆ ಬಾರಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಗುರುಮಠಕಲ್/ಸೈದಾಪುರ : ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು, ತಮಟೆ ಬಾರಿಸುತ್ತಾ ಗ್ರಾಮದ ವಿವಿಧ ರಸ್ತೆಗಳ ಮೂಲಕ ಬೃಹತ್ ಮಿಂಚಿನ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಂಟ್) ದುರಸ್ಥಿಯಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಸ್ವಚ್ಛತೆ ಕೊರತೆಯಿಂದ ದುರ್ವಾಸನೆ ವ್ಯಾಪಿಸಿದೆ. ವಿದ್ಯುತ್ ಸಮಸ್ಯೆ, ಸಿಸಿ ರಸ್ತೆ ಹಾಗೂ ಚರಂಡಿಗಳ ಕೊರತೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಉಂಟಾಗಿ ಕಲುಷಿತ ನೀರು ಮಿಶ್ರಣವಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಲ್ಲೇ ಈ ಪರಿಸ್ಥಿತಿ ಇದ್ದರೆ ಉಳಿದ ಗ್ರಾಮಗಳ ಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದ ಅವರು, ಸಂಬಂಧಪಟ್ಟ ಪಿಡಿಓ, ತಾಲೂಕು ಪಂಚಾಯತ್ ಇಒ ಹಾಗೂ ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡೇವಿಡ್ ಸ್ಯಾಮಿಲ್, ಜಗದೀಶ ಹಿರೇಮಠ, ರಫೀಕ್ ಪಟೇಲ್, ಆಂಜನೇಯ, ಬಸವರಾಜ ಬಾವೂರ ಸಾಲಿಮನಿ, ಮಚ್ಚೆ ಬನ್ನಪ್ಪ ಬಾವೂರ, ಮರೆಪ್ಪ ಉಪ್ಪಾರ್, ಬಸವರಾಜ ಆನಂಪಲ್ಲಿ, ಯಂಕಪ್ಪ ಬಾವೂರ ಹೊಸಮನಿ, ಜಮ್ಸೆಪ್ಪ ಬಡಿಗೇರಾ, ಇಬ್ರಾಹಿಂ ಫೈಲ್, ಸಾಬರೆಡ್ಡಿ ಹೊಸಳ್ಳಿ, ಲಕ್ಷ್ಮಣ ಆನಂಪಲ್ಲಿ, ಬೀರಪ್ಪ ಬಾಜರ್, ಮರೆಪ್ಪ ಶಿಲ್ಪಿ ಬಾವೂರ, ಬಸವರಾಜ ಬಾವೂರ, ತಾಯಪ್ಪ ಬಾವೂರ, ಬಸವರಾಜ ಗ್ಯಾರೇಜ್, ಖಾಜಪ್ಪ ಪಿಂಜಾರ್, ಕೊಂಡರೆಡ್ಡಿ, ಹಣಮಂತ ಬಾವೂರ, ಸುಭಾಷ್ ಗ್ಯಾರೇಜ್, ಮಹಾದೇವಪ್ಪ ಕಾಕಿ, ಭೀಮಪ್ಪ ಟೆಂಟ್, ಮಂಜಪ್ಪ ಎದ್ದೇರಿ, ಬನ್ನಪ್ಪ ಕುಂಬಾರ, ಮೂಕ ಭೀಮರಾಯ, ಮಲ್ಲಪ್ಪ ಹೊಟ್ಟೆ, ಪಿಲಿಂಗ ಅಂಬಿಗೇರ್, ಶಿವಪ್ಪ ನಾಟೇಕಾರ, ಭೀಮಪ್ಪ ಹೊಸಮನಿ, ಸಾಬಮ್ಮ ಅರಿಕೇರಿ, ಕಾಶಮ್ಮ ಗುಡೂರು, ಕಮಲಮ್ಮ ಪೂಜಾರಿ, ತಾಯಮ್ಮ ಕುರುಬರ, ಅಂಜಮ್ಮ ಬಾವೂರ, ವಸಂತಮ್ಮ ಬಾವೂರ, ನಿಂಗಮ್ಮ ಬಾವೂರ, ಮಕ್ತಿಂಬಿ ಕತ್ತಣ್ಣೋರ್ , ಮುನೀರಮ್ಮ ಫೈಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ತೀವ್ರ ಬೇಸಿಗೆ ಹಿನ್ನೆಲೆ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಒದಗಿಸಬೇಕು.
–ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ






