ಗುರುಮಠಕಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ; ಸಚಿವ ಪ್ರಿಯಾಂಕ್ ಖರ್ಗೆ ಯಾದಗಿರಿಗೆ ಭೇಟಿ ನೀಡಬೇಕು : ಶಾಸಕ ಶರಣಗೌಡ ಕಂದಕೂರ

ಯಾದಗಿರಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತುರ್ತಾಗಿ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ ಇಲಾಖೆ ಮಟ್ಟದ ಸಭೆ ನಡೆಸಬೇಕು. ಜಿಲ್ಲೆ ಮತ್ತು ವಿಶೇಷವಾಗಿ ಗುರುಮಠಕಲ್ ಮತಕ್ಷೇತ್ರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಹಾಗೂ ಆರ್‌ಒ ಪ್ಲಾಂಟ್ ಸಮಸ್ಯೆಗಳ ಗಂಭೀರತೆ ತಿಳಿದರೆ ಮಾತ್ರ ಶಾಶ್ವತ ಪರಿಹಾರ ಸಾಧ್ಯವಾಗಲಿದೆ ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಸೋಮವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ತಮ್ಮ ಮತಕ್ಷೇತ್ರದಲ್ಲಿ ದುರಸ್ತಿ ಆಗದೇ, ನಿರ್ವಹಣೆಗೆ ಹಣವಿಲ್ಲದೆ ಅನೇಕ ಆರ್‌ಒ ಪ್ಲಾಂಟ್‌ಗಳು ಬಂದ್ ಆಗಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕವಿದೆ ಎಂದು ಹೇಳಿದರು.
ಆರ್‌ಒ ಪ್ಲಾಂಟ್‌ಗಳ ದುರಸ್ತಿಗಾಗಿ ಈ ಹಿಂದೆ ಕೊರೆಸಿದ್ದ ಬೋರ್‌ವೆಲ್‌ಗಳಿಗೆ ಸಂಬಂಧಿಸಿದಂತೆ 1.13 ಕೋಟಿ ರೂ. ಬಿಲ್ ಇನ್ನೂ ಬಾಕಿಯಿದೆ. ಈ ಕಾರಣದಿಂದ ಕೆಲಸ ಮಾಡಿದ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದು, “ಬಿಲ್ ಮಾಡಿಸದಿದ್ದರೆ ವಿಷ ಕುಡಿಯುತ್ತೇವೆ” ಎಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂಬ ವಿಷಯವನ್ನು ಶಾಸಕರು ಸಚಿವರ ಗಮನಕ್ಕೆ ತಂದರು.
ಇಡಿ ಜಿಲ್ಲೆಯಲ್ಲಿ ಆರ್‌ಒ ಪ್ಲಾಂಟ್‌ಗಳ ದುರಸ್ತಿಗೆ ಸುಮಾರು 9 ಕೋಟಿ ರೂ. ಅನುದಾನ ಅಗತ್ಯವಿದೆ. ಈ ಕುರಿತು ಇದುವರೆಗೂ 20 ರಿಂದ 25 ಬಾರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಗುರುಮಠಕಲ್ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ತೀವ್ರವಾಗಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್‌ಒ ಪ್ಲಾಂಟ್‌ಗಳ ದುರಸ್ತಿ ಮತ್ತು ನಿರ್ವಹಣೆಯನ್ನು ಹೇಗೆ ಸಮರ್ಪಕವಾಗಿ ನಡೆಸಬೇಕು ಎಂಬುದಕ್ಕೆ ನನಗೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂಬುವುದನ್ನು ಪ್ರಮಾಣಿಕವಾಗಿ ಒಪ್ಪಿಕೊಳ್ಳುತ್ತೆನೆ ಎಂದರು.
ಮುಂದುವರೆದು ಮಾತನಾಡಿದ ಅವರು, ಇಡೀ ರಾಜ್ಯದಲ್ಲೇ ಈ ಸಮಸ್ಯೆ ಇದೆ. ಆದ್ದರಿಂದ ಆರ್‌ಒ ಪ್ಲಾಂಟ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟ ನೀಲನಕ್ಷೆ ಹಾಗೂ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು. ಅದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದರು.
ಈಗಾಗಲೇ ಗುರುಮಠಕಲ್ ಕ್ಷೇತ್ರಕ್ಕೆ ಆರ್‌ಒ ಪ್ಲಾಂಟ್ ದುರಸ್ತಿಗಾಗಿ 56.54 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಶಾಸಕರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬಾಕಿ ಇರುವ ಬಿಲ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಸದನದಲ್ಲಿ ಭರವಸೆ ನೀಡಿದರು.
ಜಲಧಾರೆ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆಯಲ್ಲಿರುವ ಸಮಸ್ಯೆಗಳನ್ನೂ ಸರಿಪಡಿಸಲಾಗುವುದು ಎಂದು ತಿಳಿಸಿದರು.







