ಗುರುಮಠಕಲ್ | ಬೆಳೆಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ʼʼನಮ್ ಹೊಲದಾಗ ನೀರು ನಿಂತು ಸರ್ವನಾಶ ಆಯ್ತು, ಎಲ್ಲ ಬೆಳೆ ಹಾಳಾಗಿದೆ, ಎಣ್ಣಿ ಕುಡಿಯುವಂತಾಗಿದೆ ಸರ್” ಎಂದು ಗುರುಮಠಕಲ್ ತಾಲೂಕಿನ ಮಲ್ಹಾರ ಗ್ರಾಮದ ರೈತ ಮಹಾದೇವಪ್ಪ ಕಣ್ಣೀರಿನಲ್ಲೇ ತಮ್ಮ ಅಳಲನ್ನು ಶಾಸಕ ಶರಣಗೌಡ ಕಂದಕೂರ ಅವರ ಎದುರು ಹಂಚಿಕೊಂಡರು.
ಸೋಮವಾರದ ಅತಿವೃಷ್ಟಿಯಿಂದ ಬೆಳೆಹಾನಿ ವೀಕ್ಷಿಸಲು ಶಾಸಕ ಕಂದಕೂರ ರೈತರ ಹೊಲಗಳಿಗೆ ಭೇಟಿ ನೀಡಿದ ವೇಳೆ, ಹಲವು ರೈತರು ತಮ್ಮ ದುಃಖವನ್ನು ಹಂಚಿಕೊಂಡು, “70 ಸಾವಿರ ಸಾಲ ಮಾಡಿದ್ದೇವೆ, ಈಗ ಅದನ್ನು ಹೇಗೆ ತೀರಿಸೋದು ಗೊತ್ತಾಗುತ್ತಿಲ್ಲ” ಎಂದು ಕಣ್ಣೀರಿಟ್ಟರು.
ಸ್ಥಳದಲ್ಲಿದ್ದ ತಹಶೀಲ್ದಾರ್ ಸುರೇಶ್ ಅಂಕಲಗಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾತೇಂದ್ರನಾಥ ಸೂಗೂರು ಅವರಿಗೆ ಶಾಸಕ ಕಂದಕೂರ ರೈತರ ನಿಜಸ್ಥಿತಿ ತಿಳಿದುಕೊಳ್ಳಲು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡುವಂತೆ ಸೂಚಿಸಿದರು. ಕೃಷಿ ಮತ್ತು ಕಂದಾಯ ಇಲಾಖೆಯ ನಡುವೆ ಸಮನ್ವಯತೆಯ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಯಾವ ಕಾರಣಕ್ಕೂ ಸುಳ್ಳು ಹೇಳುವುದಿಲ್ಲ. ನೈಜ ಸಮೀಕ್ಷೆ ಮಾಡಿ, ಹಾನಿಗೊಳಗಾದ ಪ್ರತಿಯೊಬ್ಬ ರೈತರನ್ನೂ ಗಣನೆಗೆ ತೆಗೆದುಕೊಳ್ಳಿ. ಕೇವಲ ಕಾಟಾಚಾರದ ವರದಿ ಬೇಡ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸರ್ಕಾರದ ಪರಿಹಾರ ಮೊತ್ತ ತೀರಾ ಕಡಿಮೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಡಿಆರ್‌ಎಫ್ ನಿಯಮಾನುಸಾರ ಸರ್ಕಾರ ಎರಡು ಹೆಕ್ಟೇರ್‌ಗೆ ಕೇವಲ 8,500 ರೂ. ಪರಿಹಾರ ನೀಡುತ್ತದೆ. ಇದು ಜಮೀನಿನಲ್ಲಿನ ಕಳೆ ತೆಗೆಯಲು ಸಹ ಸಾಲುವುದಿಲ್ಲ. ತೊಗರಿ, ಹೆಸರು ಸೇರಿದಂತೆ ಹಲವಾರು ಬೆಳೆಗಳು ಹಾನಿಗೊಳಗಾಗಿವೆ. ವರದಿ ಬಂದ ತಕ್ಷಣ ಸಿಎಂ, ಡಿಸಿಎಂ ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಮಾಡಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆನೂರ (ಕೆ) ಗ್ರಾಮದ ಭೀಮಾ ನದಿ ತೀರದಲ್ಲಿ ರಸ್ತೆಗಳು ಹಾಳಾಗಿದ್ದರಿಂದ, ಶಾಸಕ ಕಂದಕೂರ ರೈತರ ಟ್ರ್ಯಾಕ್ಟರ್ ಹತ್ತಿ ಹೊಲಗಳಿಗೆ ತೆರಳಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ಚರ್ಮ ದಪ್ಪವಾಗಿದೆ. ಎಷ್ಟೇ ತಿವಿದರೂ ಎಚ್ಚರವಾಗೋದಿಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲೇಬೇಕು ಎನ್ನುವ ಪರಿಸ್ಥಿತಿ ಬಂದಿದೆ.
–ಶರಣಗೌಡ ಕಂದಕೂರ, ಶಾಸಕ ಗುರುಮಠಕಲ್







