ಗುರುಮಠಕಲ್ | ಸುಜಾತ ಎಸ್.ಆವಂಟಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಗುರುಮಠಕಲ್: ಚಿತ್ರಕಲೆ, ಸಾಹಿತ್ಯ ಮತ್ತು ಸಂಗೀತದಂತಹ ಕಲೆಗಳು ಎಲ್ಲರಿಗೂ ಸಾಧ್ಯವಲ್ಲ. ಅವು ಮನದಾಳದ ಭಾವನೆಗಳಿಗೆ ಭೌತಿಕ ರೂಪ ನೀಡುವ ಮಹತ್ವದ ಕಾರ್ಯವಾಗಿದ್ದು, ಚಿತ್ರಕಲೆ ಎಂದರೆ ಒಂದು ರೀತಿಯ ಕಠಿಣ ತಪಸ್ಸು ಎಂದು ನಿವೃತ್ತ ಶಿಕ್ಷಕ ಅಖಂಡೇಶ್ವರಸ್ವಾಮಿ ಹಿರೇಮಠ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಚಿತ್ರ ಕಲಾವಿದೆ ಸುಜಾತ ಎಸ್. ಆವಂಟಿ ಅವರ ಮೂರನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ–ವಿಸ್ಪರ್ ಆಫ್ ಕಲರ್ಸ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂತರಂಗದ ಭಾವನೆಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿದರೆ ಸಾಹಿತ್ಯ, ಬಣ್ಣಗಳ ಮೂಲಕ ಮೂಡಿಸಿದರೆ ಚಿತ್ರಕಲೆ. ಆದರೆ ಚಿತ್ರಕಲೆ ಕೇವಲ ಭಾವ ಮತ್ತು ಬಣ್ಣಗಳ ಮಿಲನವಲ್ಲ. ಕಲಾವಿದನ ನಂತರವೂ ಆತನ ಕಲಾಕೃತಿಗಳು ಆತನನ್ನು ಅಮರನನ್ನಾಗಿಸುತ್ತವೆ. ಕಲೆಗೆ ಕಲಾವಿದರು ಪಡುವ ಪರಿಶ್ರಮ ಹಾಗೂ ಮುಡಿಪಾಗುವ ಪ್ರಕ್ರಿಯೆಯಿಂದಾಗಿ ಅದ್ಭುತ ಕಲಾವಿದರು ಸದಾ ಸ್ಮರಣೀಯರಾಗಿ ಉಳಿಯುತ್ತಾರೆ ಎಂದರು.
ಚಿತ್ರಕಲಾ ಶಿಕ್ಷಕ ಲಕ್ಷ್ಮಣರಾವ ಶ್ರೀಗಿರಿ ಮಾತನಾಡಿ, ಕಲೆ ಕೇವಲ ಮನರಂಜನೆಯಲ್ಲ. ಅದು ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜಕ್ಕೆ ಸಂದೇಶವನ್ನೂ ನೀಡುತ್ತದೆ. ಬಣ್ಣಗಳ ಮೂಲಕ ಕುಂಚದಲ್ಲಿ ಭಾವನೆಗಳನ್ನು ಮೂಡಿಸುವುದು ಅತ್ಯಂತ ಸೂಕ್ಷ್ಮ, ಸಂವೇದನಾಶೀಲ ಹಾಗೂ ಕ್ರಿಯಾಶೀಲ ಕಾರ್ಯವಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಮಳಖೇಡಕರ್ ಮಾತನಾಡಿ, ಕಲೆಗೆ ಬೆಲೆ ಕಟ್ಟಲಾಗದು. ಎಲ್ಲರಿಗೂ ಕಲೆ ಸಿದ್ಧಿಸುವುದಿಲ್ಲ. ಚಿತ್ರಕಲೆಯಲ್ಲಿ ಒಂದೇ ಚಿತ್ರದಲ್ಲಿ ಹಲವು ಅರ್ಥಗಳು ಸ್ಪುರಿಸುತ್ತವೆ. ಬಳಸಿರುವ ಬಣ್ಣಗಳಲ್ಲಿ ಕಲಾವಿದರ ಭಾವನೆಗಳ ಜತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಭಾವವೂ ಅಡಗಿರುತ್ತದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬುಡ್ಡಪ್ಪ ಜನಾರ್ಧನ ಮಾತನಾಡಿ, ಒಂದೊಂದು ಚಿತ್ರವೂ ನೂರಾರು ಕಥೆಗಳನ್ನು ಹೇಳುತ್ತವೆ. ಒಂದು ಚಿತ್ರ ಇಡೀ ಸಮಾಜದ ಕಥೆಯಾಗಿ, ಕಲಾವಿದನ ಪರಿಶ್ರಮದಿಂದ ಜನಿಸಿದ ಶಿಶುವಿನಂತಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಇಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗಬೇಕು. ಈ ಚಿತ್ರಕಲಾ ಪ್ರದರ್ಶನ ಯುವ ಕಲಾವಿದರಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ಪ್ರಾಂಶುಪಾಲ ಮಲ್ಲಿಕಾರ್ಜುನ ಹೊಸಮನಿ, ಉಪನ್ಯಾಸಕ ನಂದಕಿಶೋರ, ಕಲಾವಿದೆ ಸುಜಾತ ಎಸ್.ಆವಂಟಿ, ಉಪನ್ಯಾಸಕಿ ಪದ್ಮ, ಉಪಸ್ಥಿತರಿದ್ದರು






