ಗ್ಯಾರಂಟಿ ಒಂದು ವರ್ಷ ನಿಲ್ಲಿಸಿ ರೈತರ ಸಾಲ ಮನ್ನಾ ಮಾಡಿ: ಸಿಎಂಗೆ ಶಾಸಕ ಕಂದಕೂರ ಆಗ್ರಹ

ಯಾದಗಿರಿ : ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಒಂದು ವರ್ಷ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾದರೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದರು.
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಹೊನಗೇರಾ, ಆಶನಾಳ ಹಾಗೂ ಯಡ್ಡಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ 38 ಶಾಸಕರಿದ್ದಾಗಲೇ ಜೆಡಿಎಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿತ್ತು. ಈಗ 138 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ರೈತರ ಪರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಮಳೆ ಕೊರತೆಯಿಂದ ರೈತರು ಆತ್ಮಹತ್ಯೆಯಂತಹ ದುರ್ಘಟನೆಗಳತ್ತ ತಳ್ಳಲ್ಪಡದಂತೆ ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಹತ್ತಿಕುಣಿ ಡ್ಯಾಂ ನಾಲೆ ಆಧುನೀಕರಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು 75 ಕೋಟಿ ರೂ. ಅನುದಾನ ತಂದಿರುವುದನ್ನು ಸ್ವಾಗತಿಸಿದ ಶಾಸಕ ಕಂದಕೂರ, ಇದರಿಂದ ಕೆಳಭಾಗದ ರೈತರಿಗೆ ನೀರಿನ ಅನುಕೂಲವಾಗಲಿದೆ ಎಂದು ಹೇಳಿದರು.
ಹೊನಗೇರಾ ಗ್ರಾಮದ ಗುಂಡಗುರ್ತಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು, ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರಿಗೆ ನಿಗದಿತ ಏಳು ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ವಿದ್ಯುತ್ ವ್ಯತ್ಯಯವಾದ ಅವಧಿಯನ್ನು ಹೆಚ್ಚುವರಿಯಾಗಿ ಪೂರೈಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಟಿಸಿ ವಿತರಣೆಯಲ್ಲೂ ರೈತರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಹೊನಗೇರಾ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಹಾಗೂ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಡಿಪೋ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆಶನಾಳ ಗ್ರಾಮದಲ್ಲಿ ಯಾದಗಿರಿ–ಹೈದರಾಬಾದ್ ಮುಖ್ಯರಸ್ತೆಯಿಂದ ಗ್ರಾಮದವರೆಗೆ 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಅವರು, ಪ್ರಾಥಮಿಕ ಶಾಲೆಗೆ ನಾಲ್ಕು ಕೊಠಡಿಗಳ ನಿರ್ಮಾಣ ಹಾಗೂ 15 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳುವುದಾಗಿ ಹೇಳಿದರು.
ಯಡ್ಡಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದ ಸೇತುವೆ ಮತ್ತು ರಸ್ತೆ ಅಭಿವೃದ್ಧಿ, 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಪೂರ್ಣಗೊಂಡಿದ್ದು, ವಾಲ್ಮೀಕಿ ಸಮುದಾಯ ಭವನಕ್ಕೆ 13.58 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ಹೊಂದಿದ್ದರೆ ತಕ್ಷಣ ಸಾಲಮನ್ನಾ ಘೋಷಿಸಬೇಕು. ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಮಹಾದೇವ, ಪಿಡಬ್ಲೂಡಿ ಎಇಇ ಕೈಲಾಶ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ, ಜೆಸ್ಕಾಂ ಎಇಇ ಮಾರ್ಕಂಡೇಯ, ಎಇ ಶಂಕರಗೌಡ, ರಾಮಸಮುದ್ರ ಗ್ರಾಪಂ ಆಡಳಿತಾಧಿಕಾರಿ ಪರಶುರಾಮ, ಪಿಆರ್‌ಇ ಅಧಿಕಾರಿ ಶರಣಬಸವ, ಲ್ಯಾಂಡ್ ಆರ್ಮಿಯ ಬನ್ನಪ್ಪ ಕೋಮಾರ, ಬಿಇಒ ಈರಣ್ಣ ಕನ್ನಳ್ಳಿ, ಆರ್‌ಐ ರಾಜಶೇಖರ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಟಿಎಪಿಸಿಎಂಸಿಯ ಅಧ್ಯಕ್ಷರಾದ ಹಣಮಂತ ಅಕ್ಕಿ, ಬಸ್ಸುಗೌಡ ಚಾಮನಳ್ಳಿ, ಸೋಮನಗೌಡ ಬೆಳಗೇರಾ, ಬಾಪೂಗೌಡ ರಾಮಸಮುದ್ರ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಸಿದ್ದಣ್ಣ ಬೆಳಗೇರಾ, ಸೇರಿದಂತೆ ಇತರರಿದ್ದರು.






