ಹಾವೇರಿ | ರೈತರ ಸಮಸ್ಯೆ ಆಲಿಸಿದ ಉಪಲೋಕಾಯುಕ್ತ

ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ
ಹಾವೇರಿ : ಇಲ್ಲಿನ ಶಿವಲಿಂಗೇಶ್ವರ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ಬುಧವಾರ ಬೆಳ್ಳಂ ಬೆಳಗ್ಗೆ ಶಿವಲಿಂಗೇಶ್ವರ ತರಕಾರಿ ಮಾರುಕಟ್ಟೆ ಭೇಟಿ ವೇಳೆ ದಲ್ಲಾಳಿಗಳ ಕಮಿಷನ್ ಹಾವಳಿಗೆ ಗರಂ ಆದ ಉಪ ಲೋಕಾಯುಕ್ತರು, ಸರಿಯಾದ ಜಿಎಸ್ಟಿ ನಂಬರ್ ಇಲ್ಲದ ಬಿಲ್ ಬುಕ್, ಬಿಲ್ ನೀಡದೇ ತರಕಾರಿ ಮಾರಾಟ ಮಾಡುತ್ತಿದ್ದ ಏಜೆಂಟ್ರನ್ನು ತರಾಟೆಗೆ ತಗೆದುಕೊಂಡರು.
ಮಾರುಕಟ್ಟೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಕ್ಕೆ ಬೇಸರ ವ್ಯಕ್ತಪಡಿಸಿ, ಎಪಿಎಂಸಿಯ ಕಾರ್ಯದರ್ಶಿಯನ್ನು ಕರೆದು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಪಾರ್ಕಿಂಗ್ ಸ್ಥಳ, ಬಿಲ್ಬುಕ್ ಚೆಕ್ ಮಾಡಿದರು. ಬೈಕ್, ಕಾರುಗಳಿಗೆ ಮನಬಂದಂತೆ ಹಣ ಪಡೆಯುತ್ತಿದ್ದ ಟೆಂಡರ್ ದಾರನಿಗೆ ಅಲ್ಲಿಯೂ ಸಹ ತರಾಟೆ ತಗೆದುಕೊಂಡರು.
ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿರುವ ಕುರಿತಂತೆ ಕೆಎಸ್ಸಾರ್ಟಿಸಿ ಡಿಸಿಗೆ ಮಾಹಿತಿ ಕೇಳಿದರು. ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಪ್ರಯಾಣಿಕರಿಗೆ ಸರಿಯಾದ ಸೌಲಭ್ಯಗಳಿಲ್ಲದಿರುವುದನ್ನು ಕಂಡು ಗರಂ ಆಗಿ ಶೀಘ್ರದಲ್ಲಿಯೇ ಸರಿಪಡಿಸುವಂತೆ ತಾಕೀತು ಮಾಡಿದರು.
ಹಾವೇರಿ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳಕಾಲ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಿವಿಧ ಇಲಾಖೆ ಕಚೇರಿಗಳಿಗೆ ಭೇಟಿ ನೀಡಲಿದ್ದು, ಸರಕಾರಿ ಕಚೇರಿಗಳ ವ್ಯವಸ್ಥೆ ಹಾಗೂ ಭ್ರಷ್ಟಾಚಾರ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.