ಸುರಪುರದಲ್ಲಿ ಭಾರೀ ಮಳೆ; ವಿವಿಧೆಡೆ ಹಾನಿ

ಸುರಪುರ, ಜೂ. 2: ಮಂಗಳವಾರ ಬೆಳಗ್ಗಿನ ಜಾವ ಸುರಿದ ಭಾರೀ ಮಳೆಗೆ ಪಟ್ಟಣದ ವಿವಿಧೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಪಟ್ಟಣದ ಗಾಂಧಿ ವೃತದಲ್ಲಿರುವ ಹನುಮಾನ ದೇವಸ್ಥಾನದ ಒಳಗಡೆ ಮಳೆ ನೀರು ನುಗ್ಗಿದ್ದು, ದೇವಸ್ಥಾನದ ಒಳಗೆ ಭಕ್ತರು ಹೋಗಲು ಸಾಧ್ಯವಾಗದೆ ಬೇಸರ ವ್ಯಕ್ತಪಡಿಸಿದ್ದಾರೆ.ಅದೇ ರೀತಿ ಶ್ರೀ ವೇಣು ಗೋಪಾಲ ಸ್ವಾಮಿ ದೇವಸ್ಥಾನದ ಬಳಿಯಲ್ಲಿರುವ ಅಂಗಡಿಗಳಲ್ಲೂ ಮಳೆ ನೀರು ನುಗ್ಗಿದ್ದರಿಂದ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ.
ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದ ಮೂಲಕ ದೇವಸ್ಥಾನದ ಕಡೆಗೆ ಹೋಗುವ ರಸ್ತೆ ಬದಿಯಲ್ಲಿನ ಚರಂಡಿ ಹೂಳು ತುಂಬಿ ಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಅಂಗಡಿ ಹಾಗೂ ಕಿರಾಣಿ ವಸ್ತುಗಳನ್ನು ಇಡಲಾಗಿದ್ದ ಗೋದಾಮಿನ ಒಳಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ಆಹಾರ ಸಾಮಗ್ರಿಗಳು ನೀರಿನಲ್ಲಿ ನೆನೆದು ಹಾಳಾಗಿವೆ.
ಈ ಸಂದರ್ಭದಲ್ಲಿ ಅಂಗಡಿಯ ಮಾಲಕ ಶ್ರೀರಾಮ ರಾಠಿ ಮಾತನಾಡಿ, ಪ್ರತಿ ವರ್ಷವೂ ಮಳೆಗಾಲ ಆರಂಭವಾದರೆ ನಮಗೆ ಈ ಕಷ್ಟ ತಪ್ಪಿದ್ದಲ್ಲ. ಕಳೆದ ಎರಡು ವರ್ಷದ ಹಿಂದೆಯೂ ಇದೇ ರೀತಿ ನೀರು ನುಗ್ಗಿದರಿಂದ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಈಗಲೂ ಮಳೆಗಾಲದ ಆರಂಭದಲ್ಲಿಯೇ ಮಳೆ ನೀರು ನುಗಿದ್ದರಿಂದ ಅಂದಾಜು 15 ಲಕ್ಷ ರೂ.ಗಳಷ್ಟು ಮೌಲ್ಯದ ವಸ್ತುಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಜೊತೆಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆಯ ಪ್ರದೀಪ್ ನಾಲ್ವಡೆ, ನಗರ ಸಭೆಯ ಹಿರಿಯ ಅಭಿಯಂತರ ಮಹೇಶ ಮಾಳಿಗೆ ಮತ್ತಿತರರು ಭೇಟಿ ನೀಡಿ ವೀಕ್ಷಿಸಿದರು.






