ಯಾದಗಿರಿ | ಶೋಷಿತ ಮುಕ್ತ ಸಮಾಜ ನಿರ್ಮಾಣದ ಕನಸುಗಾರ ಹೆಗಡೆ; ಡಾ.ಡಿ.ಜಿ.ಸಾಗರ

ಯಾದಗಿರಿ: ಸರ್ವಮಾನವಕುಲಕ್ಕೂ ಬುದ್ಧನ ತತ್ವ ಸಿದ್ಧಾಂತಗಳು ಆದರ್ಶವಾಗಬೇಕು, ಬುದ್ಧನ ಸತ್ಯವನ್ನು ಅರಿತು ಅನುಸರಿಸುವುದು ನಮ್ಮೆಲ್ಲರ ಕರ್ತವ್ಯ. ಬುದ್ಧಘೋಷ ದೇವೇಂದ್ರ ಹೆಗಡೆಯವರ ಹೋರಾಟವು ಶೋಷಿತ–ಮುಕ್ತ ಸಮಾಜ ನಿರ್ಮಾಣದ ತುಡಿತವಾಗಿತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಡಾ.ಡಿ.ಜಿ.ಸಾಗರ ಹೇಳಿದರು.
ಶಹಾಪುರದ ಶುಭಶ್ರೀ ಹೋಟೆಲ್ ಸಭಾಂಗಣದಲ್ಲಿ ದಲಿತಪರ ಸಂಘಟನೆಗಳ ವತಿಯಿಂದ ಆಯೋಜಿಸಲಾದ ಬುದ್ಧವಾಸಿ ಹಾಗೂ ದಲಿತ ಸಾಹಿತಿ ಬುದ್ಧಘೋಷ ದೇವೇಂದ್ರ ಹೆಗಡೆಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು.
ಹೆಗಡೆಯವರು ಜಾತಿ-ಧರ್ಮಗಳ ಅಡೆತಡೆ ಮೀರಿ ಮಾನವೀಯ ಮೌಲ್ಯಗಳ ಪರ ಹೋರಾಡಿದವರು. ಬೌದ್ಧ ತತ್ವಗಳನ್ನು ಸಾಮಾಜಿಕ ಕ್ರಾಂತಿಯ ಶಕ್ತಿಯಾಗಿ ಪರಿವರ್ತಿಸಲು ಪ್ರಯತ್ನಿಸಿದವರು. ಸರ್ಕಾರಿ ನೌಕರರಾಗಿದ್ದರೂ ಸಮಾಜದ ಬದಲಾವಣೆಯ ಕನಸಿನಿಂದ ದೂರ ಉಳಿಯಲಿಲ್ಲ. ಅವರ ಜೀವನ ಬುದ್ಧನ ತತ್ವಗಳ ಜೀವಂತ ಮಾದರಿ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಎಸ್.ಪಿ. ಸುಳ್ಳೆದ ಸುರೇಶ ಹಾದಿಮನಿ, ತಿಮ್ಮಯ್ಯ ಪುರ್ಲೆ, ಡಾ. ಭೀಮಣ್ಣ ಮೇಟಿ, ಹನುಮೇಗೌಡ ಮರ್ಕಲ್, ಭೀಮರಾಯ ಹೋಸಮನಿ, ಡಾ. ಗಾಳೆಪ್ಪ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಮಾತನಾಡಿದರು.
ಸಭೆಗೆ ದಲಿತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ್ ಹೋಸಮನಿ ಪ್ರಾಸ್ತಾವಿಕ ಭಾಷಣ ಮಾಡಿದರು. ದಲಿತ ಹಿರಿಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಭಗವಂತ ಅನುವಾರ ಹಾಗೂ ರಾಹುಲ್ ಹುಲಿಮನಿ ಮಾಹಾಬೋಧಿ ಸತ್ವ ಪಂಚಶೀಲ ಚರಣ ಮಂತ್ರ ಪಠಿಸಿದರು.
ನೂರಾರು ದಲಿತ ಮುಖಂಡರು, ಅಭಿಮಾನಿಗಳು ಹಾಗೂ ಡಿ.ಎಸ್.ಎಸ್. ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೊನೆಯಲ್ಲಿ ಅಯ್ಯಾಳಪ್ಪ ರಸ್ತಾಪುರ ವಂದಿಸಿದರು.







