ಹುಣಸಗಿ | ವಾರಬಂಧಿ ರದ್ದುಪಡಿಸಿ ನ. 15ರವರೆಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಅ.24ರಂದು ಹೆದ್ದಾರಿ ಬಂದ್ : ಹಣಮರಡ್ಡಿ ಕುಪ್ಪಿ

ಹುಣಸಗಿ: ವಾರಬಂಧಿ ಪದ್ಧತಿಯನ್ನು ಕೈಬಿಟ್ಟು ನ.15ರವರೆಗೆ ಎಡದಂಡೆ ಮತ್ತು ಬಲದಂಡೆ ಮುಖ್ಯ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಅವರ ನೇತೃತ್ವದಲ್ಲಿ ಅ.24ರಂದು ದೇವಾಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಹಣಮಂತ್ರಾಯಗೌಡ ಹಣಮರಡ್ಡಿ ಕುಪ್ಪಿ ತಿಳಿಸಿದ್ದಾರೆ.
ರೈತರ ಬೆಳೆಗಳು ಸಂಪೂರ್ಣವಾಗಿ ಕೈಗೆ ಬರಬೇಕಾದರೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವುದು ಅತ್ಯಗತ್ಯವಾಗಿದೆ. ಆದರೆ, ಸರ್ಕಾರ ಕೈಗೊಂಡಿರುವ ಅವೈಜ್ಞಾನಿಕ ವಾರಬಂಧಿ ಪದ್ಧತಿಯಿಂದ ರೈತರು ಭಾರಿ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಈಗಾಗಲೇ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ವಾರಬಂಧಿ ಪದ್ಧತಿಯ ನಿರ್ಧಾರ ಮತ್ತಷ್ಟು ಹೊಡೆತ ನೀಡಿದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ವಾರಬಂಧಿ ಪದ್ಧತಿಯನ್ನು ತಕ್ಷಣ ಕೈಬಿಟ್ಟು ನವೆಂಬರ್ 15ರವರೆಗೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಬೆಳೆಗಳು ಒಣಗಿ ರೈತರು ನಷ್ಟ ಅನುಭವಿಸುವ ಮುನ್ನವೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ರಾಜುಗೌಡ ಅವರು ಸದಾ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು, ಇದೀಗ ರೈತರ ಹಿತ ಕಾಪಾಡುವ ಉದ್ದೇಶದಿಂದ ಹೋರಾಟಕ್ಕೆ ಮುಂದಾಗಿದ್ದಾರೆ. ರೈತರ ಬದುಕು ಹಾಗೂ ಬೆಳೆಗಳ ರಕ್ಷಣೆಯ ದೃಷ್ಟಿಯಿಂದ ಈ ಪ್ರತಿಭಟನೆ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 24ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕುಗಳ ರೈತರು ಸೇರಿದಂತೆ ಕಾಲುವೆಗಳ ಕೊನೆಯ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಹಣಮಂತ್ರಾಯಗೌಡ ಹಣಮರಡ್ಡಿ ಕುಪ್ಪಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






