ಹುಣಸಗಿ | ನ.30ರೊಳಗೆ ಎಲ್ಲ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳಿ: ಸೋಮಶೇಖರ ಬಿರಾದಾರ

ಹುಣಸಗಿ: ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಪ್ರತಿಯೊಬ್ಬ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ ಹೇಳಿದರು.
ತಾಲೂಕಿನ ಕೊಡೇಕಲ್ ಪಟ್ಟಣದಲ್ಲಿರುವ ನೇತಾಜಿ ಸುಭಾಷಚಂದ್ರ ಬೋಸ್ ಯುವಕ ಸಂಘದ ನ್ಯಾಯಬೆಲೆ ಅಂಗಡಿ (ಸಂಖ್ಯೆ 37)ಗೆ ಶುಕ್ರವಾರ ಭೇಟಿ ನೀಡಿದ ಅವರು, ಪಡಿತರ ವಿತರಣೆ ಹಾಗೂ ದಾಸ್ತಾನು ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ಪಡಿತರ ಚೀಟಿದಾರರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಬಯೋಮೆಟ್ರಿಕ್ ಮೂಲಕ ಹೆಬ್ಬೆರಳಿನ ಗುರುತು ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಅಥವಾ ತಮ್ಮ ಮೊಬೈಲ್‌ನಲ್ಲಿ ಲಭ್ಯವಿರುವ ಅನ್ನಸೇವಾ ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆಯನ್ನು ನವೆಂಬರ್ 30, 2026ರೊಳಗೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕ ಸಿ.ಎಸ್. ರಾಜು, ರಾಜಪ್ಪಗೌಡ, ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕ ಪ್ರಮೋದ ಜೋಶಿ ಸೇರಿದಂತೆ ಹಲವು ಪಡಿತರ ಫಲಾನುಭವಿಗಳು ಉಪಸ್ಥಿತರಿದ್ದರು.






