ಹುಣಸಗಿ | ಖಬರಸ್ತಾನ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಆರೋಪ: ತೆರವಿಗೆ ಆಗ್ರಹ

ಹುಣಸಗಿ: ಪಟ್ಟಣದ ಸರ್ವೆ ನಂ. 457ರ ಖಬರಸ್ತಾನ್ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ಅನುಮತಿ ಪಡೆಯದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅನಧಿಕೃತ ಮಳಿಗೆಗಳನ್ನು ಕೂಡಲೇ ತೆರವುಗೊಳಿಸುವಂತೆ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಯಾದಗಿರಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ನ. 25ರಂದು ಹುಣಸಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿರುವ ಸಮಿತಿಯು, ಮಳಿಗೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದೆ.
ಈ ಹಿಂದೆ ನ. 5ರಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಸಮಿತಿಯು, ಸದರಿ ಜಾಗದ ಮಾಲೀಕತ್ವ, ಸರ್ವೆ ನಂಬರ್, ವಿಸ್ತೀರ್ಣ, ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿ, ಅನುಮೋದಿತ ನಕ್ಷೆ, ವಕ್ಫ್ ಮಂಡಳಿಯ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರ (ಎನ್‌ಒಸಿ), ಪಂಚಾಯಿತಿ ಸಭೆಯ ನಿರ್ಣಯ ಮತ್ತು ಸ್ಥಳ ಪರಿಶೀಲನಾ ವರದಿಯ ಪ್ರಮಾಣೀಕೃತ ಪ್ರತಿಗಳನ್ನು ಒದಗಿಸುವಂತೆ ಕೋರಿತ್ತು.
ಇದಕ್ಕೆ ಸಂಬಂಧಿಸಿದಂತೆ ನ. 13ರಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ವಕ್ಫ್ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದು, ಅಗತ್ಯ ದಾಖಲೆಗಳನ್ನು ಪಂಚಾಯಿತಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದ್ದರು. ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಪುರಸಭೆ ಕಾಯ್ದೆಯ ಅನ್ವಯ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ವಕ್ಫ್ ಮಂಡಳಿಯಿಂದ ಈವರೆಗೆ ಯಾವುದೇ ದಾಖಲೆಗಳು ಸಲ್ಲಿಕೆಯಾಗಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಹೀಗಾಗಿ, ಖಬರಸ್ತಾನ್ ಜಾಗದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಕಾನೂನುಬದ್ಧತೆಯನ್ನು ಪರಿಶೀಲಿಸಿ, ಅವು ಅನಧಿಕೃತವೆಂದು ದೃಢಪಟ್ಟಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದರೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಕಾಶಿನಾಥ ಎಸ್. ಹಾದಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್. ಕಟ್ಟಿಮನಿ, ಬಸವರಾಜ ದೊಡ್ಡಮನಿ, ಗುರುರಾಜ ಮಜ್ಜಗಿ ಹಾಗೂ ಪ್ರಶಾಂತ ಚವ್ಹಾಣ ಅವರು ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೂ ಸಲ್ಲಿಸಿದ್ದಾರೆ.






