ಹುಣಸಗಿ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಹುಣಸಗಿ: ತಾಲೂಕಿನ ನಾರಾಯಣಪೂರ ವ್ಯಾಪ್ತಿಯ ರಾಯನಗೋಳ ತಂಗಡಬೈಲ್ ಅರಣ್ಯ ಪ್ರದೇಶದಲ್ಲಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ವೆ ನಂ. 38/2ರ ಅರಣ್ಯ ವಲಯದಲ್ಲಿ ಮೇ 5ರಂದು ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಬಂಡೆಗಳ ಮಧ್ಯೆ ಸಿಲುಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಶವದ ಸ್ಥಿತಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತದೇಹವು ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಯ ಕೂದಲಿನ ಭಾಗ ಉದುರಿಬಿದ್ದಿತ್ತು. ಮುಖದ ಚರ್ಮ ಸಂಪೂರ್ಣ ಸುಟ್ಟು ಹೋಗಿದ್ದು, ತಲೆ ಬುರುಡೆ ಮಾತ್ರ ಕಾಣಿಸುತ್ತಿತ್ತು. ದೇಹದ ಚರ್ಮವೂ ಕರಕಲಾಗಿದ್ದು, ಎರಡೂ ಕಾಲುಗಳು ಮಡಚಿದ ಸ್ಥಿತಿಯಲ್ಲಿ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಅಯ್ಯಪ್ಪ, ಎಎಸ್‌ಐ ನಿಂಗಪ್ಪ ಹಾಗೂ ಅರಣ್ಯ ಇಲಾಖೆಯ ಕಾಶೀನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ನಾರಾಯಣಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಗುರುತು ಹಾಗೂ ಸಾವಿನ ಕಾರಣ ಕುರಿತು ತನಿಖೆ ಮುಂದುವರಿದಿದೆ.




