ಹುಣಸಗಿ | ಚಿರತೆ ದಾಳಿಗೆ ಆಕಳು ಕರು ಬಲಿ : ರೈತರಲ್ಲಿ ಆತಂಕ

ಸಾಂದರ್ಭಿಕ ಚಿತ್ರ | Photo credit : PTI
ಹುಣಸಗಿ: ತಾಲೂಕಿನ ಗೆದ್ದಲಮಾರಿ ಗ್ರಾಮದ ಹೊರವಲಯದಲ್ಲಿರುವ ನದಿ ತೀರದ ಶಿವಪುತ್ರಪ್ಪ ಅವರ ಹೊಲದ ಶೆಡಿನಲ್ಲಿ ಕಟ್ಟಿಹಾಕಿದ್ದ ಆಕಳ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.
ರೈತ ಪುತ್ರಪ್ಪ ಮಲ್ಲಪ್ಪ ಅವರು ಮಂಗಳವಾರ ರಾತ್ರಿ 11 ಗಂಟೆಯವರೆಗೆ ಹೊಲದಲ್ಲಿದ್ದು, ಆಕಳು ಕರುವಿಗೆ ನೀರು ಕುಡಿಸಿ ಶೆಡಿನಲ್ಲಿ ಕಟ್ಟಿಹಾಕಿ ಮನೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ಹೊಲಕ್ಕೆ ತೆರಳಿ ನೋಡಿದಾಗ ಕರುವಿನ ದೇಹದ ಅರ್ಧಭಾಗವನ್ನು ತಿಂದು, ಅದನ್ನು ಎಳೆದುಕೊಂಡು ಹೋಗಲು ಸಾಧ್ಯವಾಗದೆ ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಘಟನೆಯಿಂದ ಆತಂಕಗೊಂಡ ರೈತರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕರುವಿನ ಸುತ್ತಮುತ್ತಲಿನ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದಾಗ, ಚಿರತೆ ದಾಳಿಯಿಂದಲೇ ಕರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ವಲಯ ಅರಣ್ಯ ಅಧಿಕಾರಿ ಭಾಗಪ್ಪಗೌಡ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ರಾತ್ರಿ ವೇಳೆ ಹೊಲಗಳಿಗೆ ಒಬ್ಬೊಬ್ಬರಾಗಿ ತೆರಳದೆ, ಗುಂಪಾಗಿ ತೆರಳಬೇಕು. ಟಾರ್ಚ್ ಹಾಗೂ ಕೈಯಲ್ಲಿ ಬಡಿಗೆ ಹಿಡಿದು ಜಾಗರೂಕತೆಯಿಂದ ಸಂಚರಿಸಬೇಕು ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಎಚ್.ಬಿ. ಬಿರಾದಾರ, ಗಸ್ತು ಅರಣ್ಯ ಪಾಲಕರಾದ ಸಿದ್ದಲಿಂಗಯ್ಯ, ಸೈಯದ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






