ಹುಣಸಗಿ | ಏಕಬಳಕೆ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಿ: ನ್ಯಾ.ಮರಳುಸಿದ್ಧ ಕರೆ

ಹುಣಸಗಿ: ಜನಾರೋಗ್ಯ ಹಾಗೂ ಪರಿಸರಕ್ಕೆ ಮಾರಕವಾಗಿರುವ ಏಕಬಳಕೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಎಲ್ಲ ವರ್ಗದ ಜನರು ಕೈಜೋಡಿಸಬೇಕು ಎಂದು ನ್ಯಾಯಾಧೀಶ ಎಚ್.ಜೆ. ಮರಳುಸಿದ್ಧ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸುರಪುರ ವತಿಯಿಂದ ಆಯೋಜಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರಕ್ಕೆ ಸೇರುವ ಪ್ಲಾಸ್ಟಿಕ್ 100 ವರ್ಷಗಳಿಗೂ ಹೆಚ್ಚು ಕಾಲ ನಾಶವಾಗದೆ ಉಳಿಯುತ್ತದೆ. ಇದರಿಂದ ಪರಿಸರ, ಜಲಮೂಲಗಳು, ಜಾನುವಾರುಗಳು ಹಾಗೂ ಮಾನವನ ಆರೋಗ್ಯಕ್ಕೆ ಗಂಭೀರ ಹಾನಿಯಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅಥವಾ ಇತರೆ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾದರೆ ವ್ಯಾಪಾರ ಪರವಾನಗಿ ರದ್ದುಪಡಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆಯ ಚೀಲ ಸೇರಿದಂತೆ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಾಥಾದಲ್ಲಿ ನ್ಯಾಯಾಂಗ ಅಧಿಕಾರಿಗಳು, ವಕೀಲರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು. ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದವರೆಗೆ ನಡೆದ ಜಾಥಾದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಮರಿಯಪ್ಪ, ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಾಣಗಿ, ತಾಲೂಕು ಹಿರಿಯ ಸಿವಿಲ್ ನ್ಯಾಯಾಧೀಶ ಫಕೀರವ್ವ ಕೆಳಗೇರಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಅನಸೂರ, ಕಾಸೇಸ ಕಾರ್ಯದರ್ಶಿ ಬಲಭೀಮ ನಾಯಕ , ದೇವೇಂದ್ರಪ್ಪ ಬೇವಿನಕಟ್ಟಿ, ಸಂತೋಷ್ ಗಾರಂಪಳ್ಳಿ, ಹನುಮಂತರಾಯ ಕಟ್ಟಿಮನಿ, ಯಲಪ್ಪ ಹುಲಿಕಲ್, ಬಸವರಾಜ್ ಕಟ್ಟಿಮನಿ ಕಾಮನಟಗಿ ಸೇರಿದಂತೆ ಅನೇಕ ವಕೀಲರು ಇದ್ದರು.






