ಹುಣಸಗಿ | ಬಲಶೆಟ್ಟಿಹಾಳ ಸರಕಾರಿ ಕೆರೆ ಒತ್ತುವರಿ ತೆರವಿಗೆ ಆಗ್ರಹ

ಹುಣಸಗಿ: ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಕೆರೆ ಜಮೀನು ಒತ್ತುವರಿಯಾಗಿದ್ದು, ಅಕ್ರಮ ಮನೆ ನಿರ್ಮಾಣ, ಎನ್.ಎ. ಪ್ಲಾಟ್ಗಳ ಮಾರಾಟ ಹಾಗೂ ಕೃಷಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ) ತಾಲೂಕು ಅಧ್ಯಕ್ಷ ತಿಮ್ಮಣ್ಣ ಪಿ. ಮ್ಯಾಗೇರಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಕೆರೆ ಮೂಲತಃ ಒಟ್ಟು 79 ಎಕರೆ 38 ಗುಂಟೆ ವಿಸ್ತೀರ್ಣ ಹೊಂದಿದ್ದು, ಒತ್ತುವರಿಯಿಂದಾಗಿ ಪ್ರಸ್ತುತ ಕೇವಲ 22 ಎಕರೆ ಮಾತ್ರ ಉಳಿದಿದೆ. ಹಲವರು ಕೆರೆ ಜಮೀನಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ನಿರ್ಮಿಸಿ, ತಲಾ 10ರಿಂದ 15 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರಿ ಕೆರೆಗಳ ಒತ್ತುವರಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆರೆಯ ಅಸ್ತಿತ್ವವೇ ಇಲ್ಲದಂತಾಗುವ ಆತಂಕವಿದೆ. ಆದ್ದರಿಂದ ಸಂಬಂಧಪಟ್ಟ ಕಂದಾಯ ಹಾಗೂ ಪಂಚಾಯಿತಿ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಕೆರೆಯ ಮೂಲ ದಾಖಲೆಗಳ ಆಧಾರದ ಮೇಲೆ ಅದರ ವಿಸ್ತೀರ್ಣವನ್ನು ಗುರುತಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೂಡಲೇ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆರೆಯ ಸಂಪೂರ್ಣ ಜಮೀನಿಗೆ ಹದ್ದುಬಸ್ತು ನಿರ್ಮಿಸಿ ನಾಮಫಲಕ ಅಳವಡಿಸಬೇಕು. ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದಾರೆ.






