ಹುಣಸಗಿ | ಹುಬ್ಬಳ್ಳಿಯಲ್ಲಿ ಮರ್ಯಾದೆ ಹತ್ಯೆ : ಮಾದಿಗ ಯುವ ಸೇನೆ ಖಂಡನೆ

ಹುಣಸಗಿ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅಂತರಜಾತಿ ವಿವಾಹದ ಹಿನ್ನೆಲೆಯಿಂದ 7 ತಿಂಗಳ ಗರ್ಭಿಣಿ ಯುವತಿಯನ್ನು ಆಕೆಯ ತಂದೆಯೇ ಭೀಕರವಾಗಿ ಕೊಲೆ ಮಾಡಿದ ಘಟನೆಗೆ ಮಾದಿಗ ಯುವ ಸೇನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಜೊತೆಗೆ, ಕೊಲೆಯಾದ ಯುವತಿಯ ಗಂಡನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದೆ.
ಈ ಕುರಿತು ಮಾತನಾಡಿದ ಮಾದಿಗ ಯುವ ಸೇನೆ ಜಿಲ್ಲಾಧ್ಯಕ್ಷ ಬಸವರಾಜ ಹಗರಟಗಿ, ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದಕ್ಕೆ ಇನಾಂ ವೀರಾಪುರದ ಮರ್ಯಾದೆ ಹತ್ಯೆ ಸ್ಪಷ್ಟ ಸಾಕ್ಷಿಯಾಗಿದೆ. ಈ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ ಎಂದರು.
ಇನಾಂ ವೀರಾಪುರ ಗ್ರಾಮದಲ್ಲಿ ಲಿಂಗಾಯತ ವೀರಶೈವ ಸಮಾಜಕ್ಕೆ ಸೇರಿದ ಯುವತಿ ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಜೀವಭಯದ ಹಿನ್ನೆಲೆಯಲ್ಲಿ ದಂಪತಿ ಕೆಲಕಾಲ ಊರನ್ನು ಬಿಟ್ಟು ದೂರವಾಗಿದ್ದು, ಇತ್ತೀಚೆಗೆ ಮರಳಿ ಗ್ರಾಮಕ್ಕೆ ಬಂದಿದ್ದರು. ಈ ಸಂದರ್ಭ ತನ್ನ ಮಗಳು ಪರಿಶಿಷ್ಟ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ತಂದೆ 7 ತಿಂಗಳ ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಇದು ನಾಡಿನಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ಜಾತಿರಹಿತ ಸಮ ಸಮಾಜಕ್ಕಾಗಿ ಹೋರಾಡಿದ ಬಸವಣ್ಣನ ಅನುಯಾಯಿಗಳೆಂದು ಹೇಳಿಕೊಳ್ಳುವ ಲಿಂಗಾಯತ ಸಮಾಜದ ವ್ಯಕ್ತಿಯೊಬ್ಬ ಅಂತರಜಾತಿ ವಿವಾಹದ ಕಾರಣಕ್ಕೆ ಸ್ವಂತ ಮಗಳನ್ನೇ ಕೊಲೆ ಮಾಡುವ ಮಟ್ಟಕ್ಕೆ ಹೋಗಿರುವುದು ಅತ್ಯಂತ ಖಂಡನೀಯವಾಗಿದೆ. ಬಸವಣ್ಣನ ಸಂದೇಶವನ್ನು ಸಾರುವ ಮಠಾಧೀಶರು ಹಾಗೂ ಸ್ವಾಮೀಜಿಗಳು ಈ ಘಟನೆಗೆ ವಿರುದ್ಧವಾಗಿ ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ಶಿಕ್ಷಿತ ಸಮಾಜದಲ್ಲಿಯೇ ಜಾತಿ ಆಧಾರಿತ ಮರ್ಯಾದೆ ಹತ್ಯೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಶಿಕ್ಷಣದ ಬೆಳಕಿನಲ್ಲಿ ಜಾತಿ ವ್ಯವಸ್ಥೆ ಕರಗಬೇಕಾಗಿದ್ದರೆ, ಅದೇ ಶಿಕ್ಷಣದ ನೆರಳಲ್ಲಿ ಜಾತಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ಮೂಢನಂಬಿಕೆಗಳು ಹೆಚ್ಚಾಗುತ್ತಿರುವುದು ಸಮಾಜದ ವಿಪರ್ಯಾಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಜೊತೆಗೆ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವ ಮೂಲಕ ನ್ಯಾಯ ಒದಗಿಸಬೇಕೆಂದು ಮಾದಿಗ ಯುವ ಸೇನೆ ಒತ್ತಾಯಿಸಿದೆ.







