ಹುಣಸಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಹಕರಿಸಿ: ವೆಂಕಟಗಿರಿ ದೇಶಪಾಂಡೆ

ಕೊಡೇಕಲ್: ಜನವರಿ 9ರಂದು ಹುಣಸಗಿಯ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನವದಲ್ಲಿ ಹಮ್ಮಿಕೊಂಡಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಕನ್ನಡದ ಅಕ್ಷರದಮ್ಮನ ಜಾತ್ರೋತ್ಸವದ ರೂಪದಲ್ಲಿ ಆಚರಿಸಲು ಎಲ್ಲ ಸಾಹಿತ್ಯಿಕ ಮನಸ್ಸುಗಳ ಸಹಕಾರ ಅಗತ್ಯವಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಹೇಳಿದರು.
ಸ್ಥಳೀಯ ಕಾಲಜ್ಞಾನಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕೊಡೇಕಲ್ಲ ವಲಯ ಮಟ್ಟದ ಪದಾಧಿಕಾರಿಗಳು, ಹಿರಿಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವೆಂಕಟಗಿರಿ ದೇಶಪಾಂಡೆ, ಸಮ್ಮೇಳನಕ್ಕಾಗಿ ಈಗಾಗಲೇ ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ. ಕೊಡೇಕಲ್ ವಲಯದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಅಭಿಮಾನಿಗಳು ಪಾಲ್ಗೊಳ್ಳುವುದು ಮುಖ್ಯ ಎಂದು ಹೇಳಿದರು.
ಸಮ್ಮೇಳನದ ಪ್ರಚಾರ ಸಮಿತಿಯ ಭೀಮಶೇನರಾವ್ ಕುಲಕರ್ಣಿ ಮಾತನಾಡಿ, ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಮ್ಮೇಳನದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆೆ ಎಂದು ಹೇಳಿದರು.
ವಲಯ ಕಸಾಪ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಬಸವರಾಜ ಅಂಗಡಿ ಮಾತನಾಡಿ, ಹುಣಸಗಿ ತಾಲೂಕು ಕೇಂದ್ರ ಸ್ಥಳದೊಂದಿಗೆ ಸರ್ವ ಸಾಹಿತ್ಯಿಕ ರೂಪವಾಗಿ ಹುನಸೆ ಮರದಂತಿದ್ದು, ಸಧ್ಯದಲ್ಲೆ ನಡೆಯಲಿರುವ ತಾಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ‘ಹುಣಸೆ ಮರ ಮುಪ್ಪಾದರೂ, ಅದರ ಹುಳಿ ಮುಪ್ಪಾಗದಿರುವ ರೂಪದಲ್ಲಿ ಸಾಹಿತ್ಯ ಸಮ್ಮೇಳನ’ ನಡೆದು ಬಂದು ಜನಮಾನಸದಲ್ಲಿ ಮಾಸದ ನೆನಪಾಗಿ ಉಳಿದು ಬರುವಂತಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಸಾಪ ವಲಯಾಧ್ಯಕ್ಷ ಕೋರಿಸಂಗಯ್ಯ ಗಡ್ಡದ ಮಾತನಾಡಿ, ನಮ್ಮ ವಲಯದಿಂದ ಎಲ್ಲ ರೀತಿಯಲ್ಲಿಯೂ ತನುಮನಧನದಿಂದ ಸೇವೆ ಸಲ್ಲಿಸಲಾಗುವದು. ಹಾಗೂ ಸಮ್ಮೇಳನದಲ್ಲಿ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುವುದು ಎಂದು ಹೇಳಿದರು.
ಈ ವೇಳೆ ಹಿರಿಯ ಸಾಹಿತಿ, ನಿಕಟ ಪೂರ್ವ ಅಧ್ಯಕ್ಷ ಬಸಣ್ಣ ಗೊಡ್ರಿ, ಪ್ರಧಾನ ಕಾರ್ಯದರ್ಶಿ ಗುರು ಹುಲಕಲ್ಲ, ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳುರು, ಅಶೋಕ ಕೋಳೂರು, ಸೇರಿದಂತೆ ಇತರರು ಮಾತನಾಡಿದರು.
ಹಿರಿಯರಾದ ರಂಗನಾಥ ದೊರಿ, ವಿರಸಂಗಪ್ಪ ಹಾವೇರಿ, ಸೋಮನಿಂಗಪ್ಪ ದೊರಿ, ಬಸವರಾಜ ಭದ್ರಗೋಳ, ಬಿ.ಸಿ.ಪಾಟೀಲ್, ಮೋಹನ ಪಾಟೀಲ್, ಪತ್ರಕರ್ತ ರಾಘವೇಂದ್ರ ಕಾಮನಟಗಿ, ಕಾಂತೇಶ ಹಲಗಿಮನಿ, ಗುರು ಹುಲ್ಕಲ್, ನಾಗನಗೌಡ ಪಾಟೀಲ್, ಬಸವರಾಜ ಕೋಳಕೂರ, ಚಂದ್ರಶೇಖರ ಹೊಕ್ರಾಣ , ರಾಜಶೇಖರ ಹೋಳಿಕಟ್ಟಿ, ಸೋಮಶೇಖರ ಪಂಜಗಲ್ಲ, ಬಸವರಾಜ ಕೆಂಡದ, ಮೌನೇಶ ಹೂಗಾರ, ಪ್ರಕಾಶ ಬಾಚ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.







