ಹುಣಸಗಿ | ಹೆಣ್ಣು ಮಕ್ಕಳ ರಕ್ಷಣೆಗೆ ಮಹಿಳಾ ಆಯೋಗ ಸದಾ ಸಿದ್ಧ: ಡಾ.ನಾಗಲಕ್ಷ್ಮಿ ಚೌಧ್ರಿ

ಹುಣಸಗಿ : ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ರಾಜ್ಯ ಮಹಿಳಾ ಆಯೋಗ ಸದಾ ಸಿದ್ಧವಿದ್ದು, ತಾಯಂದಿರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗಳಲ್ಲಿ ಮೆರೆಯುವಂತೆ ಬೆಳೆಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧ್ರಿ ಹೇಳಿದರು.
ತಾಲೂಕಿನ ನಾರಾಯಣಪುರ ಸಮೀಪದ ನಾಲತವಾಡದಲ್ಲಿ ಹಳ್ಳೂರ ಫಂಕ್ಷನ್ ಹಾಲ್‌ನಲ್ಲಿ ನಡೆದ ನಾಮಕರಣ ಸಮಾರಂಭದ ಬಳಿಕ ಮಹಿಳಾ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಯಾರೊಬ್ಬರ ಸ್ವತ್ತಲ್ಲ. ಮಹಿಳೆಯರು ಶಿಕ್ಷಣದ ಮಹತ್ವವನ್ನು ಅರಿತು ಆತ್ಮವಿಶ್ವಾಸದಿಂದ ಮುಂದೆ ಬರಬೇಕು ಎಂದು ಕರೆ ನೀಡಿದರು.
ತಾವು ಕೂಡ ಉತ್ತಮ ಶಿಕ್ಷಣದ ಮೂಲಕ ಇಂದಿನ ಸ್ಥಾನಕ್ಕೇರಿರುವುದಾಗಿ ಹೇಳಿದ ಅವರು, ಮಹಿಳೆಯರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಸ್ವತಃ ತೆರಳಿ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಯಾರಾದರೂ ಕಿರುಕುಳ ನೀಡಿದರೆ ಮಹಿಳೆಯರು ಒಗ್ಗಟ್ಟಾಗಿ ಎದುರಿಸಬೇಕು. ಕೆಲಸ ಮಾಡಿಕೊಡುವ ನೆಪದಲ್ಲಿ ಹಣ ಸುಲಿಗೆ ನಡೆದರೆ ನೇರವಾಗಿ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಹೊಕ್ರಾಣಿ ಹಾಗೂ ಕರಡಕಲ್ ಪ್ರಕರಣಕ್ಕೆ ಕಠಿಣ ಕ್ರಮಕ್ಕೆ ಮನವಿ :
ಕಾರ್ಯಕ್ರಮದ ವೇಳೆ ದಲಿತ ಯುವ ನಾಯಕ ಮಂಜು ಕಟ್ಟಿಮನಿ ಅವರು ರಾಯಚೂರು ಜಿಲ್ಲೆಯ ಹೊಕ್ರಾಣಿ ಗ್ರಾಮದ ಅಶ್ವಿನಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಹಿಳಾ ಆಯೋಗದ ಅಧ್ಯಕ್ಷೆಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಡಾ. ನಾಗಲಕ್ಷ್ಮಿ ಚೌಧ್ರಿ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತಿಸಿದರು. ವಿವಿಧ ಸಮಾಜಗಳ ಮುಖಂಡರು, ಅಧಿಕಾರಿಗಳು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






